ನವದೆಹಲಿ: ವಿರೋಧ ಪಕ್ಷಗಳಿಂದ ಎದುರಾಗುವ ಕಠಿಣ ಪ್ರಶ್ನೆಗಳಿಂದ ಪಾರಾಗಲು ಹಾಗೂ ಗಮನವನ್ನು ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ 'ಆಪರೇಷನ್ ಸಿಂಧೂರ'ದ ಬಳಿಕ ಸರ್ವಪಕ್ಷಗಳ ನಿಯೋಗವನ್ನು ವಿದೇಶಗಳಿಗೆ ಕಳುಹಿಸಿಕೊಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, 'ಜಾಗತಿಕವಾಗಿ ಭಾರತಕ್ಕೆ ಧಕ್ಕೆಯಾಗಿದೆ' ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಬೆನ್ನಲ್ಲೇ ಉಗ್ರವಾದ ಕುರಿತು ವಿಶ್ವ ಸಮುದಾಯಕ್ಕೆ ವಿವರಿಸುವ ಉದ್ದೇಶದಿಂದ ಸರ್ವಪಕ್ಷಗಳ ನಿಯೋಗವನ್ನು ವಿದೇಶಗಳಿಗೆ ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ 34ನೇ ಪುಣ್ಯತಿಥಿ ಅಂಗವಾಗಿ ಮಾತನಾಡಿದ ಜೈರಾಮ್, '1950ರ ದಶಕದಿಂದಲೂ ಸರ್ವಪಕ್ಷಗಳ ನಿಯೋಗವನ್ನು ವರ್ಷಂಪ್ರತಿ ಅಕ್ಟೋಬರ್-ನವೆಂಬರ್‌ನಲ್ಲಿ ವಿಶ್ವಸಂಸ್ಥೆಗೆ ಕಳುಹಿಸಲಾಗುತ್ತಿತ್ತು. ಆದರೆ 2014ರಲ್ಲಿ ಈ ಸಂಪ್ರದಾಯವನ್ನು ಪ್ರಧಾನಿ ಮೋದಿ ನಿಲ್ಲಿಸಿದ್ದರು' ಎಂದು ಹೇಳಿದ್ದಾರೆ.
'ಆದರೆ ಈಗ ಜಾಗತಿಕವಾಗಿ ಭಾರತಕ್ಕೆ ಧಕ್ಕೆಯಾಗಿದೆ. ಇದರಿಂದ ವಿಪಕ್ಷಗಳಿಂದ ಎದುರಾಗುವ ಕಠಿಣ ಸವಾಲುಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಇದ್ದಕ್ಕಿದ್ದಂತೆ ವಿದೇಶಗಳಿಗೆ ಸಂಸದರು ಇರುವ ಸರ್ವಪಕ್ಷಗಳ ನಿಯೋಗದ ಕುರಿತು ಪ್ರಧಾನಿ ಯೋಚಿಸಿದ್ದಾರೆ' ಎಂದು ಜೈರಾಮ್ ಆರೋಪಿಸಿದ್ದಾರೆ.




