HEALTH TIPS

ಮೀಸಲಾತಿ ಹಂಚಿಕೊಳ್ಳಲು ಯಾರಿಗೂ ಇಷ್ಟವಿಲ್ಲ: ಸುಪ್ರೀಂ ಕೋರ್ಟ್‌

ನವದೆಹಲಿ: ಮೀಸಲಾತಿಯ ವ್ಯವಸ್ಥೆಯನ್ನು ರೈಲಿಗೆ ಹೋಲಿಸಿರುವ ಸುಪ್ರೀಂ ಕೋರ್ಟ್‌, 'ರೈಲಿನ ಕಂಪಾರ್ಟ್‌ಮೆಂಟ್‌ ಪ್ರವೇಶಿಸಿರುವ ಜನ ಇತರರು ಅಲ್ಲಿಗೆ ಬರುವುದನ್ನು ಒಪ್ಪುವುದಿಲ್ಲ' ಎಂದು ಹೇಳಿದೆ.

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಬಿಸಿ ಸಮುದಾಯಗಳಿಗೆ ಮೀಸಲಾತಿ ನೀಡಿರುವುದನ್ನು ವಿರೋಧಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್.ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು ಈ ಮಾತು ಹೇಳಿದೆ.

ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ಜಯಂತ ಕುಮಾರ್ ಬಂಥಿಯಾ ನೇತೃತ್ವದ ಆಯೋಗವು, ಒಬಿಸಿ ಸಮುದಾಯವು ನಿಜವಾಗಿಯೂ ರಾಜಕೀಯವಾಗಿ ಹಿಂದುಳಿದಿದೆಯೇ ಎಂಬುದನ್ನು ಪರಿಶೀಲಿಸದೆಯೇ ಆ ಸಮುದಾಯಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇಕಡ 27ರಷ್ಟು ಮೀಸಲಾತಿ ನೀಡಿದೆ ಎಂದು ಅರ್ಜಿದಾರ ಮಂಗೇಶ್ ಶಂಕರ್ ಸಸನೆ ಪರ ವಾದಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಹೇಳಿದರು.

ಆಗ ಶಂಕರನಾರಾಯಣನ್ ಅವರತ್ತ ತಿರುಗಿದ ನ್ಯಾಯಮೂರ್ತಿ ಕಾಂತ್, 'ವಿಷಯ ಏನೆಂದರೆ, ಈ ದೇಶದಲ್ಲಿ ಮೀಸಲಾತಿಯು ರೈಲಿನಂತೆ ಆಗಿದೆ. ರೈಲಿನ ಕಂಪಾರ್ಟ್‌ಮೆಂಟ್ ಪ್ರವೇಶಿಸಿದವರು ಬೇರೆ ಯಾರೂ ಅಲ್ಲಿಗೆ ಬರುವುದನ್ನು ಬಯಸುವುದಿಲ್ಲ... ಇದನ್ನೇ ಅರ್ಜಿದಾರರೂ ಮಾಡುತ್ತಿದ್ದಾರೆ' ಎಂದರು.

ರಾಜಕೀಯವಾಗಿ ಹಿಂದುಳಿದಿರುವಿಕೆಯು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಗಿಂತ ಭಿನ್ನವಾಗಿದೆ. ಒಬಿಸಿ ಸಮುದಾಯವು ರಾಜಕೀಯವಾಗಿ ಹಿಂದುಳಿದಿದೆ ಎಂದು ತಂತಾನೆ ಭಾವಿಸಲು ಆಗದು ಎಂದು ಶಂಕರನಾರಾಯಣನ್ ಹೇಳಿದರು.

'ಒಬಿಸಿ ಸಮುದಾಯಗಳಲ್ಲಿ ರಾಜಕೀಯವಾಗಿ ಹಿಂದುಳಿದಿರುವ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳನ್ನು ಮೀಸಲಾತಿಯ ಉದ್ದೇಶಕ್ಕಾಗಿ ಗುರುತಿಸಬೇಕು' ಎಂದು ಅವರು ವಾದಿಸಿದರು.

ಒಳಗೊಳ್ಳುವಿಕೆಯ ತತ್ವವನ್ನು ಪಾಲಿಸುವಾಗ, ಹೆಚ್ಚಿನ ವರ್ಗಗಳನ್ನು ರಾಜ್ಯಗಳು ಗುರುತಿಸಬೇಕು ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. 'ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳು ಇರುತ್ತವೆ. ಅವು ಸೌಲಭ್ಯಗಳಿಂದ ಏಕೆ ವಂಚಿತವಾಗಬೇಕು? ಸೌಲಭ್ಯಗಳು ನಿರ್ದಿಷ್ಟ ಕುಟುಂಬಕ್ಕೆ ಅಥವಾ ಗುಂಪಿಗೆ ಏಕೆ ಸೀಮಿತವಾಗಬೇಕು' ಎಂದು ಪ್ರಶ್ನಿಸಿದರು.

ಅರ್ಜಿಯ ಕುರಿತಾಗಿ ನೋಟಿಸ್‌ ಜಾರಿಗೆ ಆದೇಶಿಸಿದ ಪೀಠವು, ಸರ್ಕಾರದ ಪ್ರತಿಕ್ರಿಯೆ ಕೇಳಿದೆ. ಇದೇ ವಿಚಾರವಾಗಿ ಸಲ್ಲಿಕೆಯಾಗಿರುವ ಇತರ ಅರ್ಜಿಗಳೊಂದಿಗೆ ಈ ಅರ್ಜಿಯನ್ನು ಜೋಡಿಸುವಂತೆ ಸೂಚಿಸಿದೆ.

ಚುನಾವಣೆ ಬಗ್ಗೆ ನಾಲ್ಕು ವಾರಗಳಲ್ಲಿ ಅಧಿಸೂಚನೆ ಹೊರಡಿಸುವಂತೆ ಮಹಾರಾಷ್ಟ್ರ ಚುನಾವಣಾ ಆಯೋಗಕ್ಕೆ ಪೀಠವು ಸೂಚನೆ ನೀಡಿದೆ. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿನ ಒಬಿಸಿ ಮೀಸಲಾತಿಗೆ ಸಂಬಂಧಿಸಿದ ಇನ್ನೊಂದು ಅರ್ಜಿಯ ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿದೆ. ಚುನಾವಣೆಯನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸುವಂತೆಯೂ ಅದು ಸೂಚಿಸಿದೆ, ಸೂಕ್ತವಾದ ಪ್ರಕರಣಗಳಲ್ಲಿ ಹೆಚ್ಚಿನ ಸಮಯಾವಕಾಶ ಕೇಳಬಹುದು ಎಂದು ಹೇಳಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವು ವಿಚಾರಣೆಯ ಹಂತದಲ್ಲಿರುವ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ಬದ್ಧವಾಗಿರಬೇಕಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries