ಠಾಣೆ: ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಪೋಷಕರಿಗೆ ಹಣ ನೀಡಿ, 14 ವರ್ಷದ ಬುಡಕಟ್ಟು ಬಾಲಕಿಯನ್ನು ಮದುವೆಯಾಗಲು ಮುಂದಾದ ಆರೋಪದಡಿ 35 ವರ್ಷದ ವ್ಯಕ್ತಿ ಸೇರಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಕಾತಕರಿ ಸಮುದಾಯಕ್ಕೆ ಸೇರಿದವಳಾಗಿದ್ದು, ಆಕೆಯ ತಂದೆ ಪಶ್ಚಿಮ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ನಿವಾಸಿ ಮಂಗೇಶ್ ಗಡೇಕರ್ (35) ಅವರಿಂದ ₹1.20 ಲಕ್ಷ ಹಣ ಪಡೆದು, ಆತನೊಂದಿಗೆ ವಿವಾಹ ಮಾಡಲು ಮುಂದಾಗಿದ್ದರು.
ಇದನ್ನು ತಿಳಿದ ಶ್ರಮಜೀವಿ ಸಂಘಟನೆಯ (ಬುಡಕಟ್ಟು ಜನಾಂಗದವರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಂಘಟನೆ) ಸ್ಥಳೀಯ ಸ್ವಯಂಸೇವಕ ದಯಾನಂದ್ ಪಾಟೀಲ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಬುಧವಾರ ಸ್ಥಳಕ್ಕೆ ತೆರಳಿ ವಿವಾಹವನ್ನು ನಿಲ್ಲಿಸಿ, ವಿವಿಧ ಕಾಯ್ದೆಯಡಿ 11 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ಮಧ್ಯವರ್ತಿಯೊಂದಿಗೆ ಬಾಲಕಿ ತಂದೆ ಮತ್ತು ಮಲತಾಯಿ ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.




