ಮೆಂಧರ್ : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಅರಣ್ಯದಲ್ಲಿ ಉಗ್ರರ ಅಡಗುತಾಣವನ್ನು ಪತ್ತೆ ಮಾಡಿರುವ ಭದ್ರತಾ ಪಡೆಗಳು ಐದು ಕಚ್ಚಾಬಾಂಬ್‌ಗಳು ಮತ್ತು ಎರಡು ವೈರ್‌ಲೆಸ್‌ಗಳನ್ನು ವಶಕ್ಕೆ ಪಡೆದಿವೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
ಬಳಕೆಗೆ ಸಜ್ಜುಗೊಳಿಸಿ ಇಟ್ಟಿದ್ದ ಅರ್ಧ ಕೆ.ಜಿಯಿಂದ ಐದು ಕೆ.ಜಿ ತೂಗುತ್ತಿದ್ದ ಕಚ್ಚಾ ಬಾಂಬ್‌ಗಳನ್ನು ಸ್ಥಳದಲ್ಲೇ ನಿಷ್ಕ್ರಿಯಗೊಳಿಸಿ ಗಡಿ ಜಿಲ್ಲೆಯಲ್ಲಿ ಸ್ಫೋಟದ ಸಂಚನ್ನು ವಿಫಲಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಭಾನುವಾರ ಸಂಜೆ ಸುರಾನ್ ಕೋಟ್ ಸಮೀಪದ ಸುರಂತಾಲ್‌ನಲ್ಲಿ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಕೆಟ್ ಮತ್ತು ಟಿಫನ್ ಬಾಕ್ಸ್‌ನಲ್ಲಿ ಅಡಗಿಸಿ ಇಟ್ಟಿದ್ದ ಐದು ಸ್ಫೋಟಕಗಳು, ಯೂರಿಯಾ, ಗ್ಯಾಸ್ ಸಿಲಿಂಡರ್, ಬೈನಾಕ್ಯುಲರ್(ದುರ್ಬೀನು), ಮೂರು ಉಣ್ಣೆಯ ಟೋಪಿಗಳು, ಮೂರು ಹೊದಿಕೆಗಳು, ಕರವಸ್ತ್ರಗಳು ಮತ್ತು ಪಾತ್ರೆಗಳೂ ಅಡಗುತಾಣದಲ್ಲಿ ಪತ್ತೆಯಾಗಿವೆ.

