ಕೋಲ್ಕತ್ತ: ಭಾರತ-ಬಾಂಗ್ಲಾ ಗಡಿಯಲ್ಲಿನ, ಪಶ್ಚಿಮ ಬಂಗಾಳದ ಹುದಪುರದಲ್ಲಿ ನಿಯೋಜಿತ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಘಟಕವು, ಸ್ಥಳೀಯ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಅಗರಬತ್ತಿ ತಯಾರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ನಾದಿಯಾ ಜಿಲ್ಲೆಯ ಗ್ರಾಮದಲ್ಲಿ ಇತ್ತೀಚೆಗೆ 'ವೈಭವ ಸಮೃದ್ಧಿ ಸೀಮಾ ಸುಗಂಧ ಅಗರಬತ್ತಿ' ಹೆಸರಿನ ಯೋಜನೆಗೆ ಚಾಲನೆ ನೀಡಲಾಯಿತು.
'ಬಿಎಸ್‌ಎಸ್‌ನ 32ನೇ ತುಕಡಿಯು ಈ ಸಂಬಂಧ ಸ್ಥಳೀಯ ಮಹಿಳೆಯರಿಗೆ ತರಬೇತಿ ನೀಡಲು ಕೋಲ್ಕತ್ತದ ಪರಿಣತರ ನೆರವನ್ನು ಪಡೆದಿದೆ. ಅಲ್ಲದೆ, ಅಗರಬತ್ತಿ ತಯಾರಿಕೆಗೆ ಕಚ್ಚಾ ವಸ್ತುಗಳ ನೆರವನ್ನು ಒದಗಿಸಲಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಯೋಜನೆಯ ಮೊದಲ ದಿನ ಮೇ 22ರಂದು ಸುಮಾರು 400 ಪ್ಯಾಕೆಟ್ ಅಗರಬತ್ತಿ ಮಾರಾಟ ಆಗಿದೆ. ಸ್ಥಳೀಯರಲ್ಲದೇ ಬಿಎಸ್‌ಎಫ್ ತುಕಡಿಯ ಸಿಬ್ಬಂದಿ ಖರೀದಿಸಿದ್ದಾರೆ.
ಅಗರಬತ್ತಿ ತಯಾರಿಕೆಯಲ್ಲಿ ನಿರತರಾದ ಮಹಿಳೆಯರು ಗಳಿಸಿದ ಹಣವನ್ನು ಮತ್ತೆ ಕಚ್ಚಾ ವಸ್ತು ಖರೀದಿಗೆ ಬಳಸಲಿದ್ದು, ಈ ಸರಪಳಿ ಮುಂದುವರಿಯಲಿದೆ. ಅವರ ಸುಸ್ಥಿರಾಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕಮಾಂಡಿಂಗ್ ಅಧಿಕಾರಿ ಸುಜೀತ್ ಕುಮಾರ್ ತಿಳಿಸಿದರು.
ಯೋಜನೆ ಜಾರಿಗೂ ಮೊದಲ ಬಿಎಸ್‌ಎಫ್‌ನ ತಂಡ ಗ್ರಾಮಗಳಿಗೆ ತೆರಳಿ, ಗುಡಿ ಕೈಗಾರಿಕೆಯಲ್ಲಿ ಮಹಿಳೆಯರ ಕೌಶಲ ಮತ್ತು ತೊಡಗಿಸಿಕೊಳ್ಳುವ ಆಸಕ್ತಿ ಕುರಿತು ಅಭಿಪ್ರಾಯ ಸಂಗ್ರಹಿಸಿತ್ತು. ಉತ್ತಮ ಪ್ರತಿಕ್ರಿಯೆ ಆಧರಿಸಿ ಯೋಜನೆಗೆ ಚಾಲನೆ ನೀಡಲಾಯಿತು ಎಂದರು.




