ಅಸ್ತಮಾ ಶ್ವಾಸಕೋಶವನ್ನು ಬಾಧಿಸುವ ಉಸಿರಾಟ (breathing) ಸಂಬಂಧಿತ ಕಾಯಿಲೆಯಾಗಿದ್ದು, ಧೂಳು, ಹೊಗೆ, ಮಾಲಿನ್ಯ ಇತ್ಯಾದಿ ಕಾರಣಗಳಿಂದ ಇಂದು ಅನೇಕ ಜನರು ಈ ಕಾಯಿಲೆಗೆ ತುತ್ತಾಗಿದ್ದಾರೆ. ಈ ಕಾಯಿಲೆ ಉಲ್ಭಣಗೊಂಡರೆ ಜೀವಕ್ಕೆ ಅಪಾಯಕಾರಿ. ಆದ್ದರಿಂದ ಸೂಕ್ತ ಚಿಕಿತ್ಸೆಯ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ಅಸ್ತಮಾ ಕಾಯಿಲೆಯ ವಿರುದ್ಧ ಗೆಲ್ಲಬಹುದು.
ಮತ್ತು ಸರಿಯಾದ ಸಮಯಕ್ಕೆ ಅಸ್ತಮಾ ಇರುವುದನ್ನು ಗುರುತಿಸುವ ಮೂಲಕ ಈ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ಆದರೆ ಹೆಚ್ಚಿನವರು ಈ ಕಾಯಿಲೆಗೆ ಸರಿಯಾದ ಪರಿಹಾರವಿಲ್ಲ, ಏನೇ ಮಾಡಿದರೂ ಈ ಕಾಯಿಲೆ ಗುಣಮುಖವಾಗುವುದಿಲ್ಲ ಎಂದು ಹೇಳುತ್ತಿರುತ್ತಾರೆ. ಈ ನಿಟ್ಟಿನಲ್ಲಿ ರೋಗದ ಪತ್ತೆಹಚ್ಚುವಿಕೆ ಹಾಗೂ ಅದಕ್ಕಿರುವ ಸಕಾಲಿಕ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ ತಿಂಗಳ ಮೊದಲ ಮಂಗಳವಾರ ವಿಶ್ವ ಅಸ್ತಮಾ (World Asthma Day) ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ವಿಶ್ವ ಅಸ್ತಮಾ ದಿನದ ಇತಿಹಾಸ:
ಅಸ್ತಮಾದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ ತಿಂಗಳ ಮೊದಲ ಮಂಗಳವಾರ ವಿಶ್ವ ಅಸ್ತಮಾ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 6 ರಂದು ಈ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಅಸ್ತಮಾ ದಿನವನ್ನು 1998 ರಲ್ಲಿ ಗ್ಲೋಬಲ್ ಇನಿಶಿಯೇಟಿವ್ ಫಾರ್ ಅಸ್ತಮಾ (GINA) ಎಂಬ ಸಂಸ್ಥೆಯು ಪ್ರಾರಂಭಿಸಿತು. ಈ ದಿನವನ್ನು ಪ್ರಾರಂಭಿಸುವ ಉದ್ದೇಶವು ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಆಸ್ತಮಾದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೆಗೆದುಹಾಕುವುದಾಗಿತ್ತು. ಅಂದಿನಿಂದ ಈ ವಿಶೇಷ ದಿನವನ್ನು ಪ್ರತಿ ವರ್ಷ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ.
ಅಸ್ತಮಾ ದಿನವನ್ನು ಆಚರಿಸುವ ಉದ್ದೇಶ:
ಹೆಚ್ಚುತ್ತಿರುವ ಮಾಲಿನ್ಯ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ, ಜನರು ಚಿಕ್ಕ ವಯಸ್ಸಿನಲ್ಲಿಯೇ ಅಸ್ತಮಾ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜನರು ಈ ಉಸಿರಾಟದ ಕಾಯಿಲೆಯನ್ನು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ ಮತ್ತು ಈ ರೋಗಕ್ಕೆ ಸಕಾಲಿಕ ಚಿಕಿತ್ಸೆಯನ್ನು ಕೂಡ ಪಡೆಯುವುದಿಲ್ಲ. ಆದರೆ ಸೂಕ್ತ ಹಾಗೂ ಸಕಾಲಿಕ ಚಿಕಿತ್ಸೆಯ ಮೂಲಕ ಈ ರೋಗದಿಂದ ಮುಕ್ತಿಯನ್ನು ಪಡೆಯಬಹುದು. ಹೀಗೆ ಅಸ್ತಮಾ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ವಿಶ್ವ ಆಸ್ತಮಾ ದಿನದ ಆಚರಣೆ ಏಕೆ ಮುಖ್ಯ?
ಈ ದಿನದಂದು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕ ಆಸ್ತಮಾಕ್ಕೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ತೆಗೆದುಹಾಕಬಹುದು. ಅರಿವು ಹೆಚ್ಚಾದಂತೆ, ಜನರು ತಮ್ಮ ರೋಗಲಕ್ಷಣಗಳನ್ನು ಗುರುತಿಸಬಹುದು ಮತ್ತು ಸಕಾಲಿಕ ಚಿಕಿತ್ಸೆಯನ್ನು ಪಡೆಯಲು ಪ್ರಾರಂಭಿಸಬಹುದು. ಇದಲ್ಲದೆ ಜಾಗೃತಿ ಅಭಿಯಾನಗಳು ಅಸ್ತಮಾ ರೋಗಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಅಸ್ತಮಾ ಗಂಭೀರ ಕಾಯಿಲೆಯೇ?
ಅಸ್ತಮಾ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದರಲ್ಲಿ ರೋಗಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. ಕೆಲವೊಮ್ಮೆ ಈ ಸಮಸ್ಯೆ ಇದ್ದಕ್ಕಿದ್ದಂತೆ ತೀವ್ರಗೊಳ್ಳುತ್ತದೆ. ಧೂಳು, ಹೊಗೆ, ಮಾಲಿನ್ಯ ಇದರಿಂದ ಹೆಚ್ಚಾಗಿ ಅಸ್ತಮಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸರಿಯಾದ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಈ ಸಮಸ್ಯೆ ಹೆಚ್ಚಾಗಬಹುದು ಮತ್ತು ನಿಮ್ಮ ಜೀವಕ್ಕೆ ಅಪಾಯಕಾರಿ. ಆದ್ದರಿಂದ ಈ ಕಾಯಿಲೆ ಕಾಣಿಸಿಕೊಂಡಾಗ ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಅತ್ಯಗತ್ಯ.
ಅಸ್ತಮಾ ರೋಗಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು:
- ಉತ್ತಮ ಆರೋಗ್ಯಕ್ಕಾಗಿ ಅಸ್ತಮಾ ರೋಗಿಗಳು ತಮ್ಮ ಸುತ್ತಮುತ್ತಲಿನ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು. ಧೂಳು, ಕೊಳಕು, ಹೊಗೆಯಿರುವ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಬೇಕು.
- ಶ್ವಾಸಕೋಶವನ್ನು ಆರೋಗ್ಯಕರವಾಗಿಡಲು ನಿಯಮಿತ ಯೋಗ, ಉಸಿರಾಟದ ವ್ಯಾಯಾಮ ಮಾಡುವುದರ ಜೊತೆಗೆ ಪೌಷ್ಟಿಕ ಆಹಾರ ಸೇವನೆ ಮಾಡಬೇಕು.
- ಎಣ್ಣೆಯುಕ್ತ ಮತ್ತು ತಣ್ಣನೆಯ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ.
- ಧೂಮಪಾನ ಮಾಡಬೇಡಿ, ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಿ.
- ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಧರಿಸಿ ಮತ್ತು ಪ್ರಯಾಣಿಸುವಾಗ ಇನ್ಹೇಲರ್ ಕೊಂಡೊಯ್ಯಿರಿ.
- ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ ನಿಯಮಿತವಾಗಿ ವೈದ್ಯರನ್ನು ಭೇಟಿಯಾಗಿ.




