ನವದೆಹಲಿ: ಭಾರತೀಯರ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಆಪರೇಷನ್ ಸಿಂದೂರ ಕೈಗೊಂಡು ಯಶಸ್ವಿಯಾಗಿದ್ದು ಇದನ್ನು ಪ್ರಶಂಸಿಸಿ, ಸೇನೆಗೆ ಧನ್ಯವಾದ ಸಮರ್ಪಣೆಗಾಗಿ ದೇಶಾದ್ಯಂತ ತಿರಂಗಾ ಯಾತ್ರೆ ಆಯೋಜಿಸಲಾಗುತ್ತಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಹಮದಾಬಾದ್‌ನಲ್ಲಿ ಏರ್ಪಡಿಸಿದ್ದ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದ್ದರು. ಇಲ್ಲಿ ತೆರೆದ ಜೀಪಿನಲ್ಲಿ ಭೂಪೇಂದ್ರ ಪಟೇಲ್ ಅವರು ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಹರಿಯಾಣದ ಲಡ್ವದಲ್ಲಿ ಶನಿವಾರ ಆಯೋಜಿಸಿದ್ದ ತಿರಂಗಾ ಯಾತ್ರೆಯಲ್ಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಭಾಗವಹಿಸಿದ್ದರು. ಅವರು ಭಾರತದ ಧ್ವಜವನ್ನು ಹಿಡಿದು ಜಾಥಾ ನಡೆಸಿದರು.
ಬಳಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಆಪರೇಷನ್ ಸಿಂದೂರ ಪಾಕ್ ವಿರುದ್ಧ ಯುದ್ಧವಲ್ಲ, ನವ ಭಾರತದ ಪ್ರತೀಕಾರವಾಗಿತ್ತು. ನಮ್ಮ ಸೇನೆ ಕ್ಷಿಪಣಿಗಳನ್ನು ಮಾತ್ರ ಉಡಾಯಿಸಲಿಲ್ಲ ಬದಲಿಗೆ ಚೀನಾ, ಅಮೆರಿಕದಷ್ಟೇ ನಾವೂ ಬಲಿಷ್ಠರು ಎಂಬ ಸಂದೇಶವನ್ನು ಸಾರಿತು. ಉಗ್ರವಾದ ಹುಟ್ಟಿದ ನೆಲೆಗಳನ್ನು ನಮ್ಮ ಸೇನೆ ನಾಶಪಡಿಸಿತು, ಇದು ನಮ್ಮ ಪ್ರಧಾನಿ ಮೋದಿ ಅವರ ಬಲಿಷ್ಠ ಭಾರತ ಎಂದು ಸೈನಿ ಹೇಳಿದರು.
ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹಲ್ದವಾನಿಯಲ್ಲಿ ಆಯೋಜಿಸಿದ್ದ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಮೂರು ಕಿ.ಮೀಟರ್ ಜಾಥ ನಡೆಸಿದರು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ತಿರಂಗಾ ಯಾತ್ರೆಯು ಭಾರತೀಯ ಸಶಸ್ತ್ರ ಪಡೆಗಳನ್ನು ಗೌರವಿಸುವ ಕಾರ್ಯಕ್ರಮವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಬಲವಾದ ನೀತಿಗಳು ಮತ್ತು ನಾಯಕತ್ವದಿಂದ ಭಯೋತ್ಪಾದನೆ ವಿರುದ್ಧ ನಾವು ಹೋರಾಡಲು ಸಾಧ್ಯವಾಯಿತು. ಇದು ಕೇವಲ ಯಾತ್ರೆಯಲ್ಲ, ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಶೌರ್ಯವನ್ನು ಗೌರವಿಸುವ ಅವಕಾಶ ಎಂದರು.






