ಕೋಝಿಕ್ಕೋಡ್: ಕೋಝಿಕ್ಕೋಡ್ ಹೊಸ ಬಸ್ ನಿಲ್ದಾಣದ ಕಟ್ಟಡ ಸಂಕೀರ್ಣದಲ್ಲಿ ನಿನ್ನೆ ಸಂಜೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಸಂಜೆ 5ರ ವೇಳೆಗೆ ಹತ್ತಿಕೊಂಡ ಬೆಂಕಿ ರಾತ್ರಿ 10ರ ವರೆಗೂ ನಂದಿಸಲು ಅಸಾಧ್ಯವಾದ ಸನ್ನಿವೇಶ ಕಂಡುಬಂದಿತ್ತು. ಮಧ್ಯರಾತ್ರಿ ವರೆಗೂ ಬೆಂಕಿ ನಂದಿಸುವ ಪ್ರಯತ್ನಗಳು ನಡೆದಿತ್ತು.
ಕ್ಯಾಲಿಕಟ್ ಟೆಕ್ಸ್ಟೈಲ್ಸ್ ಎಂಬ ಅಂಗಡಿಯಲ್ಲಿ ಸಂಜೆ 5:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಇದು ಇತರ ಅಂಗಡಿಗಳಿಗೂ ಹರಡಿತು.
ಬೆಂಕಿ ನಂದಿಸಲು 20 ರಷ್ಟು ಅಗ್ನಿಶಾಮಕ ದಳ ಕಾರ್ಯಾಚರಿಸಿತು. ಕರಿಪ್ಪೂರ್ ವಿಮಾನ ನಿಲ್ದಾಣದ ಅಗ್ನಿಶಾಮಕ ದಳಗಳು ಸಹ ಸ್ಥಳಕ್ಕೆ ದೌಡಾಯಿಸಿತ್ತು. ಬೆಂಕಿಯನ್ನು ರಾತ್ರಿ 9ರ ವೇಳೆಗೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ತರಲಾಯಿತು.
ಇಡೀ ನಗರ ಹೊಗೆಯಿಂದ ತುಂಬಿತ್ತು. ರಾತ್ರಿ ವೇಳೆ ಕಟ್ಟಡದಲ್ಲಿದ್ದ ಔಷಧಿ ಗೋದಾಮಿಗೂ ಅಗ್ನಿ ವ್ಯಾಪಿಸಿ ತೀವ್ರ ಕಪ್ಪು ಹೊಗೆ ಸೃಷ್ಟಿಗೊಂಡು ರಾಸಾಯನಿಕಯುಕ್ತ ಮಲಿನ ವಾಯುವಿನಿಂದ ಕಾರ್ಯಾಚರಣೆಗೆ ಸಾಕಷ್ಟು ಸವಾಲೊಡ್ಡಿತು. ಮಲಬಾರ್‍ನ ಇತರ ಜಿಲ್ಲೆಗಳ ಅಗ್ನಿಶಾಮಕ ದಳಗಳು ತಿರುವನಂತಪುರಂನಲ್ಲಿರುವ ಪ್ರಧಾನ ಕಚೇರಿಯಿಂದ ಇಲ್ಲಿಗೆ ತಲುಪಲು ಸೂಚಿಸಲಾಯಿತು.
ಬೆಂಕಿ ಅವಘಡ ಸಂಭವಿಸಿದ ತಕ್ಷಣ ಜನರನ್ನು ಸ್ಥಳಾಂತರಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜೊತೆಗೆ ಭಾನುವಾರವೂ ಆದ್ದರಿಂದ ಜನಸಂದಣಿ ಇರದಿದ್ದರಿಂದ ಜೀವಹಾನಿಗಳಾಗದೆ ಬಚಾವಾಗಲಾಯಿತು. ನಿಲ್ದಾಣದಲ್ಲಿರುವ ಎಲ್ಲಾ ಬಸ್‍ಗಳನ್ನು ಸ್ಥಳಾಂತರಿಸಲಾಗಿತ್ತು. ಈ ಪ್ರದೇಶದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.




