ದರ್ಭಂಗಾ/ಪಟ್ನಾ: ದೇಶದಾದ್ಯಂತ ಜಾತಿ ಗಣತಿ ನಡೆಯಬೇಕು ಎಂದು ವಿರೋಧ ಪಕ್ಷಗಳು ಅವಕಾಶ ವಂಚಿತ ಸಮುದಾಯಗಳ ಪರವಾಗಿ ಧ್ವನಿಯೆತ್ತಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಭಯದಿಂದಲೇ ಜನಗಣತಿಯೊಂದಿಗೆ ಜಾತಿಗಣತಿ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.
'ನಿಮಗೆಲ್ಲರಿಗೂ ತಿಳಿದಿರುವಂತೆ ನನ್ನ ಕಾರನ್ನು ಮಿಥಿಲಾ ವಿಶ್ವವಿದ್ಯಾಲಯದ ಗೇಟ್‌ನಲ್ಲಿ ಪೊಲೀಸರು ತಡೆಯಲು ಪ್ರಯತ್ನಿಸಿದ್ದರು. ಆದರೆ, ನಾನು ಸುಮ್ಮನಾಗಲಿಲ್ಲ. ನಾನು ಕಾರಿನಿಂದ ಕೆಳಗಿಳಿದು ಕಾಲ್ನಡಿಗೆಯಲ್ಲಿ ತೆರಳಿ 'ಶಿಕ್ಷಾ ನ್ಯಾಯ ಸಂವಾದ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ' ಎಂದು ರಾಹುಲ್ ಹೇಳಿದ್ದಾರೆ.
'ಬಿಹಾರ ಸರ್ಕಾರಕ್ಕೆ ನನ್ನನ್ನು ತಡೆಯಲು ಏಕೆ ಸಾಧ್ಯವಾಗಲಿಲ್ಲ ಎಂಬುದು ನಿಮಗೆ ಅರ್ಥವಾಗಿದೆಯೇ?, ಏಕೆಂದರೆ ನೀವು (ವಿದ್ಯಾರ್ಥಿಗಳು) ಹೊಂದಿರುವ ಅಪಾರ ಶಕ್ತಿಯಿಂದಾಗಿ ನಾನು ಮುನ್ನಡೆಯುತ್ತಿದ್ದೇನೆ. ಆದೇ ರೀತಿ ಪ್ರಧಾನಿ ಮೋದಿ ಅವರು ತಲೆಬಾಗಬೇಕಾದ ಶಕ್ತಿಯು ನೀವೇ ಆಗಿದ್ದೀರಿ' ಎಂದು ರಾಹುಲ್ ತಿಳಿಸಿದ್ದಾರೆ.
'ನೀವು ಸಂವಿಧಾನವನ್ನು ಹಣೆಗೆ ಒತ್ತಿಕೊಳ್ಳಬೇಕು ಮತ್ತು ದೇಶದಾದ್ಯಂತ ಜಾತಿ ಜನಗಣತಿ ನಡೆಸಬೇಕು ಎಂದು ನಾವು ಮೋದಿ ಅವರಿಗೆ ಹೇಳಿದ್ದೆವು. ಅವರು ಹಾಗೆಯೇ ಮಾಡಿದ್ದಾರೆ. ಒಂದು ವೇಳೆ ಹಾಗೆ ಮಾಡದಿದ್ದರೆ ದೇಶದ ಯುವ ಜನತೆಯಿಂದ ಆಕ್ರೋಶ ವ್ಯಕ್ತವಾಗಬಹುದೆಂಬ ಭಯದಿಂದಲೇ ಅವರು ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದಾರೆ' ಎಂದು ರಾಹುಲ್ ಹೇಳಿದ್ದಾರೆ.
'ಬಿಜೆಪಿ ಸರ್ಕಾರವು ಕೇವಲ ಅಂಬಾನಿ, ಅದಾನಿ ಸೇರಿದಂತೆ ಕಾರ್ಪೊರೇಟ್ ಸಮುದಾಯದ ಹಿತಾಸಕ್ತಿಗಳನ್ನು ಪೂರೈಸುತ್ತದೆ ಎಂಬುದು ಸತ್ಯ. ಬದಲಾಗಿ ದಲಿತರು, ಒಬಿಸಿಗಳು ಮತ್ತು ಬುಡಕಟ್ಟು ಜನಾಂಗದವರು ಅಥವಾ ಮಧ್ಯಮ ವರ್ಗದವರಿಗೆ ಅನುಕೂಲ ಮಾಡುತ್ತದೆ ಎಂಬುದು ಸುಳ್ಳು' ಎಂದು ರಾಹುಲ್ ಕಿಡಿಕಾರಿದ್ದಾರೆ.
'ನೀವು ಎನ್‌ಡಿಎ ಸರ್ಕಾರದಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ, ನಾವು ಬಿಹಾರದಲ್ಲಾಗಲಿ ಅಥವಾ ಕೇಂದ್ರದಲ್ಲಾಗಲಿ ಅಧಿಕಾರಕ್ಕೆ ಬಂದರೇ, ನಿಮ್ಮ ಹಿತಾಸಕ್ತಿಗಳನ್ನು ತಪ್ಪದೇ ಈಡೇರಿಸುತ್ತೇವೆ' ಎಂದು ಅವರು ಭರವಸೆ ನೀಡಿದ್ದಾರೆ.
ಮಿಥಿಲಾ ವಿಶ್ವವಿದ್ಯಾಲಯದ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಾಹುಲ್ ಮಾತನಾಡುತ್ತಿದ್ದರು. ಆದರೆ, ಅಲ್ಲಿ ಕಾರ್ಯಕ್ರಮವನ್ನು ನಡೆಸಲು ಸ್ಥಳೀಯ ಆಡಳಿತವು ಅನುಮತಿ ನಿರಾಕರಿಸಿತ್ತು. ಆದರೆ, ಕಾರ್ಯಕ್ರಮವನ್ನು ಪರ್ಯಾಯ ಸ್ಥಳದಲ್ಲಿ ನಡೆಸಲು ಕಾಂಗ್ರೆಸ್ ನಿರಾಕರಿಸಿತ್ತು. ಇದರಿಂದಾಗಿ ಕೆಲಕಾಲ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು.
ಬಹುದೊಡ್ಡ ರಾಜಕೀಯ ಪರಿಣಾಮ ಉಂಟು ಮಾಡುವಂತಹ ಕ್ರಮಕ್ಕೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮುಂದಿನ ದಶಕದ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸುವ ತೀರ್ಮಾನವನ್ನು ಮೇ 1ರಂದು ಪ್ರಕಟಿಸಿತ್ತು.
ಸ್ವಾತಂತ್ರ್ಯದ ನಂತರ, ದೇಶದಾದ್ಯಂತ ಜಾತಿ ಜನಗಣತಿ ನಡೆಯುತ್ತಿರುವುದು ಇದೇ ಮೊದಲು. 1931ರ ಜನಗಣತಿಯ ನಂತರ ಜಾತಿ ಗಣತಿಯನ್ನು ಕೈಬಿಡಲಾಗಿತ್ತು. ಜಾತಿ ಗಣತಿಯ ರಾಜಕೀಯ ಲಾಭ ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಈಗಾಗಲೇ 'ಸಮರ' ಆರಂಭವಾಗಿದೆ.
ಬಿಹಾರದ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿರುವಾಗ ಕೇಂದ್ರ ಸರ್ಕಾರ ಜಾತಿ ಜನಗಣತಿಯ ದಾಳವನ್ನು ಉರುಳಿಸಿದೆ.




