ಅಬುಧಾಬಿ/ಟೊಕಿಯೊ: ಪಾಕ್ ನೆಲದಿಂದ ನಡೆಯುತ್ತಿರುವ ಉಗ್ರರ ಚಟುವಟಿಕೆ ಹಾಗೂ ಭಯೋತ್ಪಾದನೆ ನಿರ್ಮೂಲನೆ ಭಾರತದ ನಿಲುವನ್ನು ವಿವಿಧ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಸರ್ವಪಕ್ಷಗಳ ಎರಡು ಪ್ರತ್ಯೇಕ ನಿಯೋಗಗಳು ಜಪಾನ್ ಮತ್ತು ಯುಎಇಗೆ ತಲುಪಿವೆ.
ಜನತಾದಳ (ಯು) ಸಂಸದ ಸಂಜಯ್ ಝಾ ನೇತೃತ್ವದ ನಿಯೋಗವು ಜಪಾನ್‌ಗೆ ತಲುಪಿದರೆ, ಶಿವಸೇನಾ ಸಂಸದ ಶ್ರೀಕಾಂತ ಶಿಂದೆ ನೇತೃತ್ವದ ನಿಯೋಗವು ಯುಎಇಗೆ ತಲುಪಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನು ನೆಲೆ ಮಾಡಿಕೊಂಡಿರುವ ಉಗ್ರರ ತಾಣಗಳನ್ನು ಗುರಿಯಾಗಿಸಿ ನಡೆದ ಯಶಸ್ವಿ ನಿರ್ದಿಷ್ಟ ದಾಳಿ ಹಿಂದೆಯೇ ನಿಯೋಗಗಳು ಭೇಟಿ ನೀಡಿದೆ. ಏಳು ನಿಯೋಗಳು ಒಟ್ಟು 33 ರಾಷ್ಟ್ರಗಳಿಗೆ ಭೇಟಿ ನೀಡಲಿವೆ.
'ಆಪರೇಷನ್ ಸಿಂಧೂರದ ನಿರ್ದಿಷ್ಟ ದಾಳಿ ಹಾಗೂ ಪಾಕ್ ನೆಲದಿಂದ ನಡೆಯುತ್ತಿರುವ ಉಗ್ರರ ಚಟುವಟಿಕೆಗಳನ್ನು ಕುರಿತು ಜಪಾನ್ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಯಿತು' ಎಂದು ಶಿಂದೆ 'ಎಕ್ಸ್'ನಲ್ಲಿ ಹೇಳಿದ್ದಾರೆ.
ಈ ನಿಯೋಗದಲ್ಲಿ ಬಿಜೆಪಿಯ ಅಪರಾಜಿತಾ ಸಾರಂಗಿ, ಬ್ರಿಜ್‌ಲಾಲ್, ಪ್ರಧಾನ್ ಬರುಅ, ಹೇಮಾಂಗ್ ಜೋಶಿ, ಕಾಂಗ್ರೆಸ್‌ನ ಸಲ್ಮಾನ್ ಖುರ್ಷೀದ್, ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಸಿಪಿಎಂನ ಜಾನ್ ಬ್ರಿಟ್ಟಾಸ್ ಇದ್ದಾರೆ.
ಈ ಸಂದರ್ಭದಲ್ಲಿ ಜಪಾನ್ ವಿದೇಶಾಂಗ ಸಚಿವ ಟಕೆಶಿ ಇವಾಯಾ ಅವರು, 'ಯಾವುದೇ ಸ್ವರೂಪದ ಭಯೋತ್ಪಾದನೆ ಸಹಿಸಲಾಗದು. ಇದರ ವಿರುದ್ಧದ ಹೋರಾಟಕ್ಕೆ ಜಪಾನ್ ಬೆಂಬಲಿಸಲಿದೆ' ಎಂದರು.
ಭಯೋತ್ಪಾದನೆ ಜಾಗತಿಕ ಬೆದರಿಕೆ -ಯುಎಇ
'ಭಯೋತ್ಪಾದನೆ ಎಂಬುದು ಜಾಗತಿಕ ಬೆದರಿಕೆ. ಮಾನವೀಯತೆಗೇ ದಕ್ಕೆ ಉಂಟು ಮಾಡುವಂತಹದು' ಎಂದು ಯುಎಇ ಹೇಳಿದ್ದು, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ಸೂಚಿಸಿದೆ.
ಅಬುದಾಭಿಯಲ್ಲಿ ಶಿವಸೇನೆ ಸಂಸದ ಶ್ರೀಕಾಂತ್ ಶಿಂದೆ ನೇತೃತ್ವದ ನಿಯೋಗವನ್ನು ಭೇಟಿಯಾಗಿದ್ದ ಯುಎಇ ರಕ್ಷಣಾ ವ್ಯವಹಾರದ ಸಚಿವ ಅಲಿ ರಷೀದ್ ಅಲ್ ನೌಯಾಮಿ ಈ ಮಾತು ಹೇಳಿದರು.
'ಭಯೋತ್ಪಾದನೆ ಕೇವಲ ಒಂದು ರಾಷ್ಟ್ರ ಅಥವಾ ಧರ್ಮಕ್ಕೆ ಸೀಮಿತವಾಗಿ ಇರುವ ಬೆದರಿಕೆಯಲ್ಲ. ನಾವು ಅಂತರರಾಷ್ಟ್ರೀಯ ಸಮುದಾಯವಾಗಿ ಇದನ್ನು ಎದುರಿಸಬೇಕು' ಎಂದು ಹೇಳಿದರು.
ಈ ನಿಯೋಗದಲ್ಲಿ ಬಿಜೆಪಿಯ ಮನನ್ ಕುಮಾರ್ ಮಿಶ್ರಾ, ಎಸ್.ಎಸ್.ಅಹ್ಲುವಾಲಿಯಾ, ಅತುಲ್ ಗರ್ಗ್, ಬಾನ್ಸುರಿ ಸ್ವರಾಜ್, ಬಿಜೆಡಿಯ ಸಸ್ಮಿತ್ ಪಾತ್ರಾ, ಐಯುಎಂಎಲ್‌ನ ಮೊಹಮ್ಮದ್ ಬಶೀರ್, ಮಾಜಿ ರಾಜತಾಂತ್ರಿಕ ಸುಜಾನ್ ಆರ್. ಚಿನೊಯ್, ಯುಎಇಯ ಭಾರತದ ರಾಯಭಾರಿ ಸುಂಜಯ್ ಇದ್ದರು.




