ನ್ಯೂಯಾರ್ಕ್/ವಾಷಿಂಗ್ಟನ್: ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನಡುವಿನ ಜಟಾಪಟಿ ತೀವ್ರಗೊಂಡಿದೆ.
ಇದರ ನಡುವೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ಟ್ರಂಪ್ ಆಡಳಿತ ತಡೆ ನೀಡಿದೆ.
ಜತೆಗೆ, ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅಸ್ತಿತ್ವದಲ್ಲಿರುವ ಬೇರೆ ಕಾಲೇಜುಗಳು ಅಥವಾ ಶಾಲೆಗಳಿಗೆ ವರ್ಗಾವಣೆ ಆಗಬಹುದಾಗಿದೆ. ಇಲ್ಲವಾದ್ದಲ್ಲಿ ಕಾನೂನಿನ ಮಾನ್ಯತೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೋಮ್‌ಲ್ಯಾಂಡ್ ಭದ್ರತಾ ಇಲಾಖೆ ಎಚ್ಚರಿಸಿದೆ.
ಅಂತರರಾಷ್ಟ್ರೀಯ ವಿದ್ಯಾರ್ಥಿ ವೀಸಾ ಹೊಂದಿರುವವರು ನಡೆಸುತ್ತಿರುವ 'ಕಾನೂನುಬಾಹಿರ ಮತ್ತು ಹಿಂಸಾತ್ಮಕ' ಚಟುವಟಿಕೆಗಳ ಕುರಿತ ಮಾಹಿತಿಯನ್ನು ಏಪ್ರಿಲ್ 30ರ ಒಳಗಾಗಿ ಸಲ್ಲಿಸುವಂತೆ ಅಮೆರಿಕ ಗೃಹ ಇಲಾಖೆಯು ಈಚೆಗೆ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು.
ಒಂದು ವೇಳೆ, ಈ ಗಡುವಿನ ಒಳಗಾಗಿ ಮಾಹಿತಿ ಸಲ್ಲಿಸದಿದ್ದಲ್ಲಿ, ವಿದೇಶಿ ವಿದ್ಯಾರ್ಥಿಗಳ ನೋಂದಣಿಗೆ ಸಂಬಂಧಿಸಿ ವಿ.ವಿ ಹೊಂದಿರುವ ಸೌಲಭ್ಯವನ್ನು ಹಿಂಪಡೆಯಲಾಗುವುದು ಎಂದು ಇಲಾಖೆ ತಿಳಿಸಿತ್ತು. ಇದರ ಬೆನ್ನಲ್ಲೇ ವಿಶ್ವವಿದ್ಯಾಲಯಕ್ಕೆ 2.7 ಮಿಲಿಯನ್ ಡಾಲರ್‌ಗೂ (ಅಂದಾಜು ₹23 ಕೋಟಿ) ಅಧಿಕ ಅನುದಾನ ನೀಡುವುದನ್ನು ಸರ್ಕಾರ ರದ್ದು ಮಾಡಿತ್ತು.
ಸರ್ಕಾರ ನೀಡಿದ್ದ ಕೆಲ ಸೂಚನೆಗಳನ್ನು ವಿಶ್ವವಿದ್ಯಾಲಯ ಇತ್ತೀಚೆಗೆ ತಿರಸ್ಕರಿಸಿತ್ತು. ಈ ಕಾರಣಕ್ಕೆ ಟ್ರಂಪ್ ಆಡಳಿತ ಈ ಕ್ರಮ ಕೈಗೊಂಡಿದೆ. ಹಾರ್ವರ್ಡ್ ವಿಶ್ವವಿದ್ಯಾಲಯ ಎಡಪಂಥೀಯ ಸಿದ್ಧಾಂತ ಬೆಂಬಲಿಸುತ್ತದೆ ಎಂಬ ಕಾರಣಕ್ಕೆ ವಿ.ವಿಗೆ ನೀಡಿರುವ ತೆರಿಗೆ ವಿನಾಯಿತಿ ಸೌಲಭ್ಯವನ್ನು ಕೂಡ ಹಿಂಪಡೆಯುವುದಾಗಿ ಸರ್ಕಾರ ಎಚ್ಚರಿಸಿತ್ತು.




