ಲಾಹೋರ್: ಭಯೋತ್ಪಾದನೆ ನಿಗ್ರಹ ನ್ಯಾಯಾಲಯ, ಜೈಲಿನಲ್ಲಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆ ಹಾಗೂ ಮುಖಭಾವ, ಧ್ವನಿ ವಿಶ್ಲೇಷಣಾ ಪರೀಕ್ಷೆಗೆ ಒಳಪಡಿಸಲು ಪೊಲೀಸರಿಗೆ ಗುರುವಾರ ಅನುಮತಿ ನೀಡಿದೆ.
ಇಮ್ರಾನ್ ಖಾನ್ ಅವರನ್ನು ಅರೆಸೇನಾ ಪಡೆ ಯೋಧರು ಇಸ್ಲಾಮಾಬಾದ್ ಹೈಕೋರ್ಟ್ ಆವರಣದಲ್ಲಿ 2023ರ ಮೇ 9ರಂದು ಬಂಧಿಸಿದ್ದರು.
ಈ ಘಟನೆ ಬೆನ್ನಲ್ಲೇ, ಹಲವೆಡೆ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಇಮ್ರಾನ್ ವಿರುದ್ಧ 12 ಭಯೋತ್ಪಾದನಾ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಇಮ್ರಾನ್ ಅವರನ್ನು ಪರೀಕ್ಷೆ ನಡೆಸಲು ಕೋರ್ಟ್ ಅಸ್ತು ಎಂದಿದೆ.
'ಎಟಿಸಿ-1 ನ್ಯಾ. ಮಂಝೆರ್ ಅಲಿ ಗಿಲ್ ಅವರು ಪ್ರಾಸಿಕ್ಯೂಷನ್ ಮನವಿಯನ್ನು ಸ್ವೀಕರಿಸಿದ್ದಾರೆ. ಲಾಹೋರ್‌ನ ಜಿನ್ನಾ ಹೌಸ್ (ಕಾರ್ಪ್ಸ್ ಕಮಾಂಡರ್ ಹೌಸ್) ಮೇಲಿನ ದಾಳಿ ಸೇರಿದಂತೆ 12 ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಇಮ್ರಾನ್ ಖಾನ್ ಅವರನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ 12 ದಿನಗಳ ಒಳಗೆ ಸುಳ್ಳು ಪತ್ತೆ ಪರೀಕ್ಷೆ ಹಾಗೂ ಮುಖಭಾವ, ಧ್ವನಿ ವಿಶ್ಲೇಷಣಾ ಪರೀಕ್ಷೆಗೆ ಒಳಪಡಿಸಲು ಅನುಮತಿಸಿದ್ದಾರೆ' ಎಂದು ಕೋರ್ಟ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪ್ರಾಸಿಕ್ಯೂಷನ್ ಮನವಿಯನ್ನು ತಿರಸ್ಕರಿಸಿದ್ದ ಖಾನ್ ಪರ ವಕೀಲರು, ಮೇ 9ರ ಪ್ರಕರಣಗಳು ನಡೆದು 727 ದಿನಗಳಾದ ನಂತರ ಪೊಲೀಸರು ಸುಳ್ಳು ಪತ್ತೆ ಪರೀಕ್ಷೆ ಹಾಗೂ ಮುಖಭಾವ, ಧ್ವನಿ ವಿಶ್ಲೇಷಣಾ ಪರೀಕ್ಷೆಗೆ ಅನುಮತಿ ಕೋರುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದರು.
ಹಾಗೆಯೇ, 21 ಭಯೋತ್ಪಾದನಾ ಪ್ರಕರಣಗಳಲ್ಲಿ ಇಮ್ರಾನ್ ಅವರಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ ಎಂದು ವಾದಿಸಿದ್ದರು.
ಎರಡೂ ಕಡೆ ವಾದ ಆಲಿಸಿದ ನಂತರ ನ್ಯಾಯಾಧೀಶರು ಪ್ರಾಸಿಕ್ಯೂಷನ್ ಮನವಿಯನ್ನು ಪುರಸ್ಕರಿಸಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಖಾನ್, 2023ರ ಆಗಸ್ಟ್‌ನಿಂದ ಅಡಿಯಾಲಾ ಜೈಲಿನಲ್ಲಿದ್ದಾರೆ.




