ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ ಎಪ್ರಿಲ್‌ನಲ್ಲಿ ನರೇಗಾದಡಿ ಉದ್ಯೋಗವನ್ನು ಬಯಸಿದವರಲ್ಲಿ 2.012 ಗ್ರಾಮೀಣ ಕುಟುಂಬಗಳು ಸೇರಿದ್ದವು. ಮೇ ತಿಂಗಳಲ್ಲಿ(ಮೇ 18ರವರೆಗೆ) ಈ ಸಂಖ್ಯೆ 2.037 ಕೋ.ಆಗಿತ್ತು.
ಕೃಷಿ ಅಥವಾ ಕೃಷಿಯೇತರ ಉದ್ಯೋಗಾವಕಾಶಗಳು ಕಡಿಮೆಯಾದಾಗ ನರೇಗಾದಡಿ ಕೆಲಸಕ್ಕೆ ಬೇಡಿಕೆ ಹೆಚ್ಚುತ್ತದೆ ಎನ್ನುವುದನ್ನು ಹಿಂದಿನ ಪ್ರವೃತ್ತಿಗಳು ತೋರಿಸಿವೆ.
ನರೇಗಾಕ್ಕೆ ಬೇಡಿಕೆ ಹೆಚ್ಚಾಗಿದ್ದರೂ ಕೇಂದ್ರ ಸರಕಾರವು ಕಳೆದ ವಿತ್ತವರ್ಷದಿಂದ ಯೋಜನೆಯಡಿ ನಿಧಿ ಹಂಚಿಕೆಯಲ್ಲಿ ಯಾವುದೇ ಹೆಚ್ಚಳವನ್ನು ಮಾಡಿಲ್ಲ.
ಲಿಬ್‌ಟೆಕ್ ಇಂಡಿಯಾ ನಡೆಸಿದ ಅಧ್ಯಯನವು 2024-25ರಲ್ಲಿ ಯೋಜನೆಯಲ್ಲಿ ಕಾರ್ಮಿಕರು ಮತ್ತು ಜಾಬ್‌ಕಾರ್ಡ್‌ಗಳಲ್ಲಿ ಹೆಚ್ಚಳವಾಗಿದ್ದರೂ ನಿಜವಾದ ಉದ್ಯೋಗ ಸೃಷ್ಟಿ ಕುಸಿದಿದೆ ಎನ್ನುವುದನ್ನು ಬಹಿರಂಗಗೊಳಿಸಿದೆ.
ಅಧ್ಯಯನದ ಪ್ರಕಾರ ಯೋಜನೆಯು 2024-25ರಲ್ಲಿ 1.16 ಕೋ.ಜಾಬ್ ಕಾರ್ಡ್‌ಗಳು ಮತ್ತು 1.31 ಕೋ.ಕಾರ್ಮಿಕರ ನಿವ್ವಳ ಸೇರ್ಪಡೆಯನ್ನು ಕಂಡಿದೆ.
ಆದರೆ ಹಿಂದಿನ ಎರಡು ವಿತ್ತವರ್ಷಗಳಲ್ಲಿ ನರೇಗಾ ಯೋಜನೆಯಡಿ ದೇಶಾದ್ಯಂತ 5.95 ಕೋ.ಕಾರ್ಮಿಕರು ಮತ್ತು 2.1 ಕೋ.ಕುಟುಂಬಗಳನ್ನು ತೆಗೆದುಹಾಕಲಾಗಿತ್ತು ಎನ್ನುವುದನ್ನೂ ಅಧ್ಯಯನವು ಬಹಿರಂಗಗೊಳಿಸಿದೆ.
ಕೆಲಸದಿಂದ ತೆಗೆಯಲಾಗಿದ್ದ ಅನೇಕ ಕಾರ್ಮಿಕರನ್ನು ಪುನಃ ನೇಮಕ ಮಾಡಿಕೊಂಡಿದ್ದರೂ ಅದೇ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿಲ್ಲ ಮತ್ತು ಉದ್ಯೋಗ ಸೂಚಕಗಳಲ್ಲಿ ಗಮನಾರ್ಹ ಕುಸಿತ ಕಂಡು ಬಂದಿದೆ ಎಂದು ಅಧ್ಯಯನ ವರದಿಯು ತಿಳಿಸಿದೆ.
ಯೋಜನೆಯು ಮಾನವ ದಿನಗಳಲ್ಲಿಯೂ ಕುಸಿತವನ್ನು ಕಂಡಿದೆ. 2023-24ರಲ್ಲಿ 289 ಕೋ.ಯಿದ್ದ ಅದು 2024-25ರಲ್ಲಿ 268 ಕೋ.ಗೆ ಇಳಿಕೆಯಾಗಿದೆ. ಈ ಅವಧಿಯಲ್ಲಿ ಪ್ರತಿ ಕುಟುಂಬಕ್ಕೆ ಸರಾಸರಿ ಕೆಲಸದ ದಿನಗಳು 52ರಿಂದ 50ಕ್ಕೆ ಇಳಿದಿವೆ ಎಂದು ವರದಿಯು ತಿಳಿಸಿದೆ.
ಗ್ರಾಮೀಣ ಸಂಕಷ್ಟವನ್ನು ಕಡಿಮೆ ಮಾಡಲು ಮೋದಿ ಸರಕಾರದ ಕ್ರಮಗಳಿಗೆ ಯುಪಿಎ ಜಾರಿಗೆ ತಂದಿದ್ದ ನರೇಗಾ ಯೋಜನೆಯು ಪೂರಕವಾಗಿದೆ. ಆದರೆ ಕೋವಿಡ್ ನಂತರ ಉದ್ಯೋಗ ಬಿಕ್ಕಟ್ಟಿನಲ್ಲಿ ಅದು ಪ್ರಮುಖ ಪಾತ್ರವನ್ನು ಹೊಂದಿದೆ. ಕೋವಿಡ್ ಉತ್ತುಂಗದಲ್ಲಿದ್ದ ಸಂದರ್ಭಕ್ಕೆ ಹೋಲಿಸಿದರೆ 2023-24ರಲ್ಲಿ ಯೋಜನೆಯಡಿ ಕೆಲಸಕ್ಕೆ ಬೇಡಿಕೆ ಕಡಿಮೆಯಾಗಿತ್ತು ಎನ್ನುವುದನ್ನು ವರದಿಗಳು ಗಮನಿಸಿವೆ,ಆದರೂ ಅದು 2014-15 ಮತ್ತು 2018-19ರ ನಡುವಿನ ಅವಧಿಯಲ್ಲಿನ ಸರಾಸರಿ ಬೇಡಿಕೆಗಿಂತ ಶೇ.15ರಷ್ಟು ಹೆಚ್ಚಿತ್ತು.




