ಇತ್ತೀಚೆಗೆ ನಾವು ಕೈಯಲ್ಲಿ ಪುಸ್ತಕ ಹಿಡಿದಿರುವವರಿಗಿಂತ ಮೊಬೈಲ್ ಹಿಡಿದಿರುವವರನ್ನೇ ಹೆಚ್ಚಾಗಿ ನೋಡುತ್ತೇವೆ. ಪುಸ್ತಕ ಓದುವ ಆಸಕ್ತಿ ಇಂದಿನ ಯುವ ಜನರಲ್ಲಿ ಕಡಿಮೆಯಾಗುತ್ತಿದೆ. ಆದರೂ ಜನರು ತಮ್ಮದೇ ಆದ ರೀತಿಯಲ್ಲಿ ಒತ್ತಡವನ್ನು ಕಡಿಮೆ ಮಾಡಲು ಅಥವಾ ತಮ್ಮನ್ನು ತಾವು ನಿರಾಳವಾಗಿರಲು ಕೆಲವು ಹವ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ.
ಕೆಲವೇ ಕೆಲವು ಜನರು ಮಾತ್ರ ಪುಸ್ತಕ ಓದುವುದನ್ನು ತಮ್ಮ ಹವ್ಯಾಸವಾಗಿ ಮಾಡಿಕೊಂಡಿರುತ್ತಾರೆ. ಆದರೆ ನಿಮಗೆ ತಿಳಿದಿದೆಯೇ? ಪುಸ್ತಕದ ಓದು ನಿಮ್ಮ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಆರೋಗ್ಯಕ್ಕೆ ಹೇಗೆ ಉಪಯುಕ್ತವಾಗುತ್ತೆ ಎಂದು ಇಲ್ಲಿದೆ ನೋಡಿ.
ಮೆದುಳನ್ನು ಬಲಿಷ್ಠಗೊಳಿಸುತ್ತದೆ
ಪುಸ್ತಕಗಳನ್ನು ಓದುವುದರಿಂದಾಗುವ ಒಂದು ಪ್ರಯೋಜನವೆಂದರೆ ಅದು ಮೆದುಳನ್ನು ಬಲಪಡಿಸುತ್ತದೆ. ಪುಸ್ತಕದ ಓದಿನಿಂದ ಮೆದುಳಿನ ಎಡ ಭಾಗದಲ್ಲಿ ಬೂದು ದ್ರವ್ಯ ಹೆಚ್ಚಳವಾಗುತ್ತದೆ. ಇದು ಗಮನ, ನೆನಪು, ಕಲಿಕೆ, ತಾರ್ಕಿಕತೆ, ಸಮಸ್ಯೆ ಪರಿಹಾರ ಮುಂತಾದ ಅರಿವಿನ ಕಾರ್ಯಗಳಲ್ಲಿ ಪಾತ್ರವಹಿಸಲು ಸಹಕರಿಸುತ್ತದೆ.
ಶಬ್ದಕೋಶ
ನೀವು ಪುಸ್ತಕಗಳನ್ನು ಓದುವುದನ್ನು ಇಷ್ಟಪಟ್ಟರೆ ಅದು ನಿಮ್ಮ ಶಬ್ದಕೋಶ ಜ್ಞಾನವನ್ನು ಹೆಚ್ಚಿಸುತ್ತದೆ. ಹೊಸ ಪದಗಳನ್ನು ಕಲಿಯಲು ನಿಮಗೆ ಅವಕಾಶ ಸಿಗುತ್ತದೆ, ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಬದುಕುವ ವಯಸ್ಸು ಹೆಚ್ಚಾಗುತ್ತದೆ
ಪುಸ್ತಕಗಳನ್ನು ಓದುವುದರಿಂದ ನೀವು ಹೆಚ್ಚು ಕಾಲ ಬದುಕುತ್ತೀರಿ. ಇದು ಸಂಶೋಧನೆಯಲ್ಲೂ ಸಾಬೀತಾಗಿದೆ.
ಸೃಜನಶೀಲತೆ
ಓದುವುದು ಮೆದುಳಿನ ನರ ಮಾರ್ಗಗಳನ್ನು ಉತ್ತೇಜಿಸುತ್ತದೆ ಎಂದು ಅಧ್ಯಯನಗಳು ತಿಳಿಸವೆ. ಈ ಪ್ರಚೋದನೆಯು ಮೆದುಳಿನ ಚಟುವಟಿಕೆ, ನೆನಪಿನಶಕ್ತಿ ಮತ್ತು ಅರಿವಿನ ಕಾರ್ಯವನ್ನು ಹೆಚ್ಚಿಸುತ್ತದೆ. ಹೀಗಾಗಿ ನಿಮ್ಮ ಸೃಜನಶೀಲತೆ ಹೆಚ್ಚಾಗುತ್ತದೆ ಮತ್ತು ಕಲಿಯುವ ನಿಮ್ಮ ಸಾಮರ್ಥ್ಯವು ವಿಸ್ತರಿಸಲ್ಪಡುತ್ತದೆ. ಅಲ್ಲದೆ, ಪುಸ್ತಕ ಓದುವುದು ಗಮನ ಮತ್ತು ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.
ಭಾವನಾತ್ಮಕ ಆರೋಗ್ಯ
ನೀವು ಪುಸ್ತಕ ಓದಿದಾಗ, ದುಃಖ, ಭಯ, ಕೋಪದಿಂದ ಹಿಡಿದು ಸಂತೋಷ ಮತ್ತು ನಗುವಿನವರೆಗೆ ಎಲ್ಲಾ ಭಾವನೆಗಳನ್ನು ನೀವು ಅನುಭವಿಸುತ್ತೀರಿ. ಇದು ನಿಮ್ಮ ಸ್ಥಿತಿಸ್ಥಾಪಕತ್ವ ಮತ್ತು ಕಷ್ಟಕರ ಸಂದರ್ಭಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಪುಸ್ತಕಗಳ ಮೂಲಕ, ನೀವು ಇತರ ಸಂಸ್ಕೃತಿಗಳು ಮತ್ತು ಅನುಭವಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶವನ್ನು ಪಡೆಯುತ್ತೀರಿ, ಇದು ನಿಮಗೆ ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ಮತ್ತು ಜನರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ.
ಒತ್ತಡದಿಂದ ಪರಿಹಾರ
ಪುಸ್ತಕ ಓದುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಓದುವಿಕೆಗೆ ನಿಮ್ಮನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯುವ ಶಕ್ತಿ ಇದೆ. ಇದರಿಂದ, ನೀವು ಇಡೀ ದಿನದ ಕೆಟ್ಟ ಅನುಭವಗಳನ್ನು ಮತ್ತು ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ಕೆಟ್ಟ ಆಲೋಚನೆಗಳನ್ನು ತೊಡೆದುಹಾಕಬಹುದು.
ಒಳ್ಳೆಯ ನಿದ್ರೆ
ಓದುವುದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ನೀವು ನಿಯಮಿತವಾಗಿ ಪುಸ್ತಕ ಓದುತ್ತಿದ್ದರೆ, ಅದು ಒತ್ತಡವನ್ನು ನಿವಾರಿಸಲು ಮತ್ತು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ಹೀಗಾಗಿ ನೀವು ಪುಸ್ತಕವನ್ನು ಓದಿದರೆ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಜೊತೆಗೆ ಆರೋಗ್ಯವನ್ನು ಸಹ ಸುಧಾರಿಸಿಕೊಳ್ಳಬಹುದು.




