HEALTH TIPS

Ind-Pak Tensions: ಐಪಿಎಲ್‌ನ ಬಾಕಿ 16 ಪಂದ್ಯಗಳು ಅನಿರ್ದಿಷ್ಟಾವಧಿಗೆ ಅಮಾನತು

 ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆ ಉಲ್ಬಣಿಸಿರುವ ಕಾರಣ, ಈ ಬಾರಿಯ ಐಪಿಎಲ್‌ ಟಿ20 ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ.

ಜಮ್ಮು ಮತ್ತು ಪಠಾಣ್‌ಕೋಟ್‌ ಮೇಲೆ ದಾಳಿ ನಡೆಸಲು ಪಾಕ್‌ ಪಡೆಗಳು ಗುರುವಾರ ರಾತ್ರಿ ಪ್ರಯತ್ನಿಸಿದ್ದವು.


ಇದರೊಂದಿಗೆ, ಗಡಿಯಲ್ಲಿ ‌ಸಂಘರ್ಷ ಏರ್ಪಟ್ಟಿತ್ತು. ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್‌ ಕಿಂಗ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ ಪಂದ್ಯವನ್ನು ಮಧ್ಯದಲ್ಲೇ ರದ್ದುಪಡಿಸಲಾಗಿತ್ತು. ಆದರೆ, ಆತಂಕ ತಪ್ಪಿಸುವ ಸಲುವಾಗಿ ಹಾಗೂ ಕ್ರೀಡಾಂಗಣದಲ್ಲಿದ್ದ ಆಟಗಾರರು, ಪ್ರೇಕ್ಷಕರ ಸುರಕ್ಷತೆ ದೃಷ್ಟಿಯಿಂದ ವಿದ್ಯುತ್‌ ವ್ಯತ್ಯಯದಿಂದಾಗಿ ಪಂದ್ಯಕ್ಕೆ ಆಡಚಣೆಯಾಗಿದೆ ಎಂದಷ್ಟೇ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿತ್ತು.

ಆದರೆ, ಧರ್ಮಶಾಲಾಕ್ಕೆ ಸನಿಹದ ಸ್ಥಳಗಳಲ್ಲಿ ವೈಮಾನಿಕ ದಾಳಿಯ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಹಿಮಾಲಯದ ತಪ್ಪಲಿನ ಈ ತಾಣವನ್ನು 'ಬ್ಲ್ಯಾಕ್‌ಔಟ್‌' ಮಾಡಲಾಗಿದೆ ಎಂಬುದು ನಂತರ ಬಹಿರಂಗವಾಯಿತು.

ಇದರ ಬೆನ್ನಲ್ಲೇ, ಟೂರ್ನಿ ಮುಂದುವರಿಕೆ ಬಗ್ಗೆ ಅನಿಶ್ಚಿತತೆಯ ಮೋಡ ಕವಿದಿತ್ತು.

ಇದೀಗ ಟೂರ್ನಿ ಅಮಾನತುಗೊಂಡಿರುವುದನ್ನು ಖಾತ್ರಿಪಡಿಸಿರುವ ಬಿಸಿಸಿಐ ಅಧಿಕಾರಿಯೊಬ್ಬರು, 'ದೇಶ ಸಂಘರ್ಷ ಎದುರಿಸುತ್ತಿರುವಾಗ ಕ್ರಿಕೆಟ್‌ ನಡೆಸುವುದು ಸರಿಯಲ್ಲ' ಎಂದು ತಿಳಿಸಿದ್ದಾರೆ. ಕಳೆದ ತಿಂಗಳು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿ ಬಳಿಕ ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ಬುಧವಾರ (ಮೇ 7) ರಾತ್ರಿ ದಾಳಿ ನಡೆಸಿದ್ದು, ಇದೀಗ ಪಾಕ್‌ ಪಡೆಗಳೂ ದಾಳಿ ಪ್ರಯತ್ನ ನಡೆಸುತ್ತಿವೆ.

ಕದನ ವಿರಾಮ ಉಲ್ಲಂಘಿಸಿರುವ ಪಾಕ್‌ ಪಡೆಗಳು, ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಡ್ರೋನ್‌ ಹಾಗೂ ಇತರ ಶಸ್ತ್ರಾಸ್ತ್ರಗಳ ಮೂಲಕ ಗುರುವಾರ ರಾತ್ರಿಯಿಡೀ ದಾಳಿ ನಡೆಸಿವೆ. ಶುಕ್ರವಾರವೂ ಅದನ್ನು ಮುಂದುವರಿಸಿದ್ದು, ತಕ್ಕ ಪ್ರತ್ಯುತ್ತರ ನೀಡುತ್ತಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ.

ದೇಶದ 13 ನಗರಗಳಲ್ಲಿ ನಡೆಯುತ್ತಿದ್ದ ಈ ಬಾರಿಯು ಐಪಿಎಲ್‌ ಆವೃತ್ತಿಯು ಮಾರ್ಚ್‌ 22ರಂದು ಆರಂಭವಾಗಿತ್ತು. ಮೇ 25ರಂದು ಫೈನಲ್‌ ನಿಗದಿಯಾಗಿತ್ತು.

ಟೂರ್ನಿಯು ಅಂತಿಮ ಹಂತಕ್ಕೆ ತಲುಪಿತ್ತು. ಲೀಗ್‌ ಹಂತದಲ್ಲಿ 12 ಹಾಗೂ ಕ್ವಾಲಿಫೈಯರ್‌, ಎಲಿಮಿನೇಟರ್, ಫೈನಲ್‌ ಸೇರಿ ನಾಲ್ಕು ಪಂದ್ಯಗಳಷ್ಟೇ ಬಾಕಿ ಇದ್ದವು.

ಆತಿಥೇಯ ಲಖನೌ ಸೂಪರ್ ಜೈಂಟ್ಸ್‌ (ಎಲ್‌ಎಸ್‌ಜಿ) ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ನಡುವಣ ಪಂದ್ಯ ಲಖನೌನಲ್ಲಿ ಇಂದು ರಾತ್ರಿ ನಡೆಯಬೇಕಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries