ವಿಶ್ವಸಂಸ್ಥೆ: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ (ಐಡಬ್ಲ್ಯುಟಿ) ಬಗ್ಗೆ ಪಾಕಿಸ್ತಾನದ 'ತಪ್ಪು ಮಾಹಿತಿ'ಗೆ ಭಾರತವು ವಿಶ್ವಸಂಸ್ಥೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಿದೆ.
ಭಾರತದ ಮೇಲೆ ಮೂರು ಯುದ್ಧಗಳು ಮತ್ತು ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಪಾಕಿಸ್ತಾನವು ಈ ಒಪ್ಪಂದದ ಆಶಯವನ್ನು ಉಲ್ಲಂಘಿಸಿದೆ ಎಂದು ಭಾರತ ಪ್ರತಿಪಾದಿಸಿದೆ.
'ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ನಿಯೋಗ ನಡೆಸುತ್ತಿರುವ ತಪ್ಪು ಮಾಹಿತಿಗೆ ನಾವು ಪ್ರತಿಕ್ರಿಯೆ ನೀಡಲು ನಿರ್ಬಂಧಿತರಾಗಿದ್ದೇವೆ. ಈ ಒಪ್ಪಂದದ ವಿಷಯದಲ್ಲಿ ಭಾರತವು ಯಾವಾಗಲೂ ಜವಾಬ್ದಾರಿಯುತ ರೀತಿಯಲ್ಲಿ ವರ್ತಿಸಿದೆ' ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಶುಕ್ರವಾರ ಹೇಳಿದ್ದಾರೆ.
'ಸಶಸ್ತ್ರ ಸಂಘರ್ಷದ ಸಮಯದಲ್ಲಿ ನೀರು- ನಾಗರಿಕ ಜೀವಗಳ ರಕ್ಷಣೆ' ಕುರಿತು ವಿಶ್ವಸಂಸ್ಥೆಯಲ್ಲಿ ಸ್ಲೊವೇನಿಯಾ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
'ಭಾರತವು ಪಾಕಿಸ್ತಾನದ ಜತೆ 65 ವರ್ಷಗಳ ಹಿಂದೆ ಸಿಂಧೂ ಜಲ ಒಪ್ಪಂದವನ್ನು ಪ್ರಾಮಾಣಿಕತೆಯಿಂದ ಮಾಡಿಕೊಂಡಿತ್ತು. ಆದರೆ, ಯುದ್ಧ ಮತ್ತು ಭಯೋತ್ಪಾದಕ ದಾಳಿ ನಡೆಸುವ ಮೂಲಕ ಪಾಕಿಸ್ತಾನವು ಈ ಒಪ್ಪಂದದ ಆಶಯವನ್ನು ಉಲ್ಲಂಘಿಸಿದೆ' ಎಂದು ಅವರು ಸಭೆಗೆ ತಿಳಿಸಿದ್ದಾರೆ.
'ಕಳೆದ ನಾಲ್ಕು ದಶಕಗಳಲ್ಲಿ ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿದ್ದರೂ, ಭಾರತವು ಈ ಅವಧಿಯುದ್ದಕ್ಕೂ ಅಸಾಧಾರಣ ತಾಳ್ಮೆ ಮತ್ತು ಹೃದಯವೈಶಾಲ್ಯ ತೋರಿಸಿದೆ' ಎಂದಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿರಿಸಿದೆ.




