HEALTH TIPS

ಸರ್ವಪಕ್ಷ ಸಭೆ: Operation Sindoor ಯಶಸ್ಸು, ಪರಿಣಾಮಗಳ ಕುರಿತು ಕೇಂದ್ರದ ವಿವರಣೆ

 ನವದೆಹಲಿ: ಭಾರತೀಯ ಸೇನೆ ನಡೆಸಿದ 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆಯ ಯಶಸ್ಸು ಹಾಗೂ ನಂತರದ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆಯಲ್ಲಿ ವಿವರ ನೀಡಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22 ನಡೆದ ಉಗ್ರರ ದಾಳಿ ಬಳಕ ನಡೆಯುತ್ತಿರುವ ಎರಡನೇ ಸರ್ವಪಕ್ಷ ಸಭೆ ಇದಾಗಿದೆ.


ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ಸಂಸತ್‌ ಭವನದಲ್ಲಿ ನಡೆಯುತ್ತಿರುವ ಸಭೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಆರೋಗ್ಯ ಸಚಿವಜೆ.ಪಿ.ನಡ್ಡಾ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸರ್ಕಾರದ ಪರವಾಗಿ ಹಾಜರಾಗಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನಿಂದ ಭಾಗವಹಿಸಿದ್ದಾರೆ.

ಇತರ ವಿರೋಧ ಪಕ್ಷಗಳಾದ ತೃಣಮೂಲ ಕಾಂಗ್ರೆಸ್‌ನ ಸಂದೀಪ್‌ ಬಂಡೋಪಾಧ್ಯಾಯ, ಡಿಎಂಕೆಯ ಟಿ.ಆರ್. ಬಾಲು, ಸಮಾಜವಾದಿ ಪಕ್ಷದ ರಾಮ್‌ ಗೋಪಾಲ್‌ ಯಾದವ್‌, ಎಎಪಿಯ ಸಂಜಯ್‌ ಸಿಂಗ್‌, ಶಿವ ಸೇನಾದ (ಯುಬಿಟಿ) ಸಂಜಯ್‌ ರಾವುತ್‌, ಎನ್‌ಸಿಪಿಯ (ಶರದ್‌ ಪವಾರ್‌) ಸುಪ್ರಿಯಾ ಸುಳೆ ಅವರೂ ಪಾಲ್ಗೊಂಡಿದ್ದಾರೆ.

ಜೆಡಿ(ಯು) ನಾಯಕ ಸಂಜಯ್‌ ಝಾ, ಎಲ್‌ಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಮತ್ತು ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಅವರೂ ಸಭೆಯಲ್ಲಿದ್ದಾರೆ.

'ಆಪರೇಷನ್ ಸಿಂಧೂರ'ದ ಕುರಿತು ಎಲ್ಲ ಪಕ್ಷಗಳಿಗೆ ಮಾಹಿತಿ ನೀಡಲು ಸರ್ಕಾರ ಬಯಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್‌ 22ರಂದು ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ, ಭಾರತೀಯ ಸೇನೆ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ಬುಧವಾರ ಮುಂಜಾನೆ 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆ ನಡೆಸಿದೆ. ಜಾಗತಿಕ ಉಗ್ರ ಮಸೂದ್‌ ಅಜರ್‌ನ ಕುಟುಂಬದ 10 ಸದಸ್ಯರು, ನಾಲ್ವರು ಆಪ್ತರು ಸೇರಿದಂತೆ 70ರಿಂದ 100 ಭಯೋತ್ಪಾದಕರು ಈ ವೇಳೆ ಹತ್ಯೆಯಾಗಿದ್ದಾರೆ. ಪಹಲ್ಗಾಮ್‌ ದಾಳಿ ನಂತರವೂ (ಏಪ್ರಿಲ್‌ 24ರಂದು) ಸರ್ವಪಕ್ಷ ಸಭೆ ನಡೆದಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries