HEALTH TIPS

ಎಸ್‌ಎಂಎಯಿಂದ ಬಳಲುತ್ತಿರುವವರ ಗೇಲಿ: ಸಮಯ್ ರೈನಾ ಸೇರಿ ಐವರಿಗೆ SC ನೋಟಿಸ್‌

ನವದೆಹಲಿ: 'ಇಂಡಿಯಾಸ್ ಗಾಟ್ ಲೇಟೆಂಟ್‌' ಕಾರ್ಯಕ್ರಮ ನಡೆಸುವ ಸಮಯ್ ರೈನಾ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಮೇಲೆ ಪ್ರಭಾವ ಬೀರುವ ಐದು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.

ವಿರಳ ಕಾಯಿಲೆಯಾದ 'ಎಸ್‌ಎಂಎ'ಯಿಂದ (ಸ್ಪೈನಲ್ ಮಸ್ಕ್ಯುಲರ್ ಎಟ್ರೋಫಿ) ಬಳಲುತ್ತಿರುವವರನ್ನು ಈ ಐದು ಮಂದಿ ತಮ್ಮ ಕಾರ್ಯಕ್ರಮದಲ್ಲಿ ಗೇಲಿ ಮಾಡಿದ್ದಾರೆ ಎಂದು ಸರ್ಕಾರೇತರ ಸಂಘಟನೆ (ಎನ್‌ಜಿಒ) 'ಕ್ಯೂರ್‌ ಎಸ್‌ಎಂಎ ಫೌಂಡೇಷನ್ ಆಫ್ ಇಂಡಿಯಾ' ದೂರಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು, ಐದು ಮಂದಿಗೆ ನೋಟಿಸ್‌ ತಲುಪಿಸಬೇಕು ಎಂದು ಮುಂಬೈ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ. ಈ ಐವರು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಪೀಠವು ಎಚ್ಚರಿಕೆ ನೀಡಿದೆ.

ಅಂಗವಿಕಲರು ಮತ್ತು ವಿರಳ ಕಾಯಿಲೆಗೆ ತುತ್ತಾದವರ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳ ವಸ್ತು-ವಿಷಯದ ಮೇಲೆ ನಿಯಂತ್ರಣ ವಿಧಿಸುವ ಸಂಬಂಧ ನಿರ್ದೇಶನ ನೀಡಬೇಕು ಎಂದು ಎನ್‌ಜಿಒ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈ ದಿಸೆಯಲ್ಲಿ ನೆರವು ಒದಗಿಸಬೇಕು ಎಂದು ಪೀಠವು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರನ್ನು ಕೋರಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವ ಬೀರುವ ಶಕ್ತಿ ಹೊಂದಿರುವವರು ಇಂತಹ ವ್ಯಕ್ತಿಗಳನ್ನು ಗೇಲಿ ಮಾಡುವುದು ನೈತಿಕ ಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸ ಎಂದು ಪೀಠವು ಹೇಳಿದೆ. ಇಂತಹ ಪ್ರಕರಣ ಮುಂದೆ ಆಗದಂತೆ ಮಾಡಲು ಶಿಕ್ಷೆಯ ಅಗತ್ಯ ಇದೆ ಎಂದು ಅದು ಹೇಳಿದೆ.

ಅಂಗವಿಕಲರು ಹಾಗೂ ವಿರಳ ಕಾಯಿಲೆಗಳಿಗೆ ತುತ್ತಾದವರ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳ ಕಾರ್ಯಕ್ರಮಗಳು, ಬರಹಗಳು ಹೇಗಿರಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ರೂಪಿಸುವ ಇರಾದೆಯನ್ನು ಪೀಠವು ವ್ಯಕ್ತಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries