HEALTH TIPS

12th Class Result | ವಿಜ್ಞಾನದಲ್ಲಿ ವಿದ್ಯಾರ್ಥಿನಿಯರ ಮೇಲುಗೈ ಇದೇ ಮೊದಲು: ವರದಿ

ನವದೆಹಲಿ: '12ನೇ ತರಗತಿಯ ವಿಜ್ಞಾನ ವಿಷಯದಲ್ಲಿ ವಿದ್ಯಾರ್ಥಿನಿಯರು ಇದೇ ಮೊದಲ ಬಾರಿಗೆ ಮೇಲುಗೈ ಸಾಧಿಸಿದ್ದಾರೆ' ಎಂದು ಶಿಕ್ಷಣ ಸಚಿವಾಲಯ ತನ್ನ ವರದಿಯಲ್ಲಿ ಹೇಳಿದೆ.

2024ರ ಕಲಾ ವಿಭಾಗದ ಫಲಿತಾಂಶಕ್ಕೆ ಹೋಲಿಸಿದಲ್ಲಿ ಈ ಬಾರಿ ವಿಜ್ಞಾನ ವಿಷಯದಲ್ಲಿ ಬಾಲಕಿಯರ ಫಲಿತಾಂಶ ಹೆಚ್ಚಳವಾಗಿದೆ. ಇದು ದೇಶದ 66 ಶಾಲಾ ಶಿಕ್ಷಣ ಮಂಡಳಿ, 54 ಸಾಮಾನ್ಯ ಮತ್ತು 12 ಮುಕ್ತ ಮಂಡಳಿಗಳ ವರದಿಗಳನ್ನು ಆಧರಿಸಿ ಸಚಿವಾಲಯ ಈ ವರದಿ ಪ್ರಕಟಿಸಿದೆ.

ದೇಶದ ಶೇ 97ರಷ್ಟು ವಿದ್ಯಾರ್ಥಿಗಳನ್ನು ಒಳಗೊಂಡ 33 ಪ್ರಮುಖ ಶಿಕ್ಷಣ ಮಂಡಳಿಗಳು ಹಾಗೂ ಶೇ 3ರಷ್ಟು ವಿದ್ಯಾರ್ಥಿಗಳನ್ನು ಹೊಂದಿರುವ ಉಳಿದ 33 ಮಂಡಳಿಗಳ ಮಾಹಿತಿಯನ್ನು ಇದು ಆಧರಿಸಿದೆ.

2022ರಲ್ಲಿ 28.2 ಲಕ್ಷ ವಿದ್ಯಾರ್ಥಿನಿಯರು ಕಲಾ ವಿಷಯದಲ್ಲಿ ಪಾಸಾಗಿದ್ದರು. ಇದೇ ವರ್ಷದಲ್ಲಿ ವಿಜ್ಞಾನ ವಿಷಯದಲ್ಲಿ 23.3 ಲಕ್ಷ ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದರು. 2023ರಲ್ಲಿ ಕಲಾ ವಿಷಯದಲ್ಲಿ 29.6 ಲಕ್ಷ ವಿದ್ಯಾರ್ಥಿನಿಯರು ಪಾಸಾದರೆ, ವಿಜ್ಞಾನ ವಿಷಯದಲ್ಲಿ 25.6 ಲಕ್ಷ ವಿದ್ಯಾರ್ಥಿನಿಯರು ಪಾಸಾಗಿದ್ದರು.

'ಕಳೆದ 11 ವರ್ಷಗಳ ದಾಖಲೆಗಳನ್ನು ಗಮನಿಸಿದರೆ ವರ್ಷದಿಂದ ವರ್ಷಕ್ಕೆ ವಿಜ್ಞಾನ ವಿಷಯದಲ್ಲಿ ವಿದ್ಯಾರ್ಥಿನಿಯರು ಪಾಸಾಗುವ ಪ್ರಮಾಣ ಹೆಚ್ಚಳವಾಗುತ್ತಿದೆ. 2013ರಲ್ಲಿ ಒಟ್ಟು 36.3 ಲಕ್ಷ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಪಾಸಾಗಿದ್ದರು. 2024ರಲ್ಲಿ ಈ ಸಂಖ್ಯೆ 61 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ತೇರ್ಗಡೆ ಪ್ರಮಾಣವೂ ಹೆಚ್ಚಳವಾಗಿದೆ. 2013ರಲ್ಲಿ 13.4 ಲಕ್ಷ ವಿದ್ಯಾರ್ಥಿನಿಯರು ಪಾಸಾಗಿದ್ದರು. 2024ರಲ್ಲಿ ಇದು 28.2 ಲಕ್ಷಕ್ಕೆ ಏರಿಕೆಯಾಗಿದೆ' ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿ ಸಂಜಯ್ ಕುಮಾರ್ ತಿಳಿಸಿದ್ದಾರೆ.

'ದೇಶದಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಇದರ ಜತೆಯಲ್ಲೇ ಇದೇ ವಿಷಯದಲ್ಲಿ ವಿದ್ಯಾರ್ಥಿನಿಯರ ತೇರ್ಗಡೆ ಪ್ರಮಾಣವೂ ಹೆಚ್ಚಳವಾಗಿದೆ. ಉಪನ್ಯಾಸಕರು, ಪ್ರಯೋಗಾಲಯ, ಸ್ಮಾರ್ಟ್ ತರಗತಿ ಸೇರಿದಂತೆ ತರಗತಿಗಳಲ್ಲಿ ಮೂಲಸೌಕರ್ಯಗಳು ಉತ್ತಮಗೊಳ್ಳುತ್ತಿರುವುದರಿಂದ ತೇರ್ಗಡೆ ಪ್ರಮಾಣವೂ ಹೆಚ್ಚಳವಾಗಿದೆ' ಎಂದು ತಿಳಿಸಿದ್ದಾರೆ.

ವರದಿಯ ಪ್ರಕಾರ 2023ರಲ್ಲಿ ಸೌಲಭ್ಯ ವಂಚಿತ ಸಮುದಾಯದ 1.7 ಲಕ್ಷ ವಿದ್ಯಾರ್ಥಿನಿಯರು 12ನೇ ತರಗತಿಯಲ್ಲಿ ಪಾಸಾಗಿದ್ದರು. 2024ರಲ್ಲಿ ಈ ಸಂಖ್ಯೆ 4.1 ಲಕ್ಷಕ್ಕೆ ಏರಿಕೆಯಾಗಿದೆ. ವಿಜ್ಞಾನ ವಿಷಯದಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ತೇರ್ಗಡೆ ಪ್ರಮಾಣ 2013ರಲ್ಲಿ 60 ಸಾವಿರವಿತ್ತು. 2024ರಲ್ಲಿ ಇದು 1.4 ಲಕ್ಷಕ್ಕೆ ಏರಿಕೆಯಾಗಿದೆ.

ಮತ್ತೊಂದೆಡೆ 12ನೇ ತರಗತಿಯ ವಾಣಿಜ್ಯ ವಿಷಯದಲ್ಲಿ ಪಾಸ್‌ ಆಗುವವರ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವುದನ್ನು ಈ ವರದಿ ಉಲ್ಲೇಖಿಸಲಾಗಿದೆ. 2022ರಲ್ಲಿ ವಾಣಿಜ್ಯ ವಿಷಯದಲ್ಲಿ 18 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದರು. 2024ರಲ್ಲಿ ಇದು 16.8 ಲಕ್ಷಕ್ಕೆ ಕುಸಿದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries