ಪೇಶಾವರ: ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 13 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, 14 ನಾಗರಿಕರು ಸೇರಿದಂತೆ 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ವಜೀರಿಸ್ತಾನ್ ಜಿಲ್ಲೆಯಲ್ಲಿ ಇಂದು (ಶನಿವಾರ) ಮುಂಜಾನೆ ಬಾಂಬ್ ನಿಷ್ಕ್ರಿಯ ಘಟಕಕ್ಕೆ ಸೇರಿದ ಮೈನ್-ರೆಸಿಸ್ಟೆಂಟ್ ಆಂಬುಶ್ ಪ್ರೊಟೆಕ್ಟೆಡ್ (ಎಂಆರ್‌ಎಪಿ) ವಾಹನಕ್ಕೆ ಆತ್ಮಹತ್ಯಾ ಬಾಂಬರ್ ಸ್ಫೋಟಕಗಳಿಂದ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದಾನೆ ಎಂದು ಮೂಲಗಳು ಹೇಳಿವೆ.
ಘಟನಾ ಸ್ಥಳದಲ್ಲಿ ಭದ್ರತಾ ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಕರ್ಫ್ಯೂ ವಿಧಿಸಲಾಗಿದೆ. ಹಫೀಜ್ ಗುಲ್ ಬಹದ್ದೂರ್ ಸಂಘಟನೆಯ ಉಪ ಬಣವಾದ ಉಸುದ್ ಅಲ್-ಹರ್ಬ್ ಉಗ್ರಗಾಮಿ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.




