ಠಾಣೆ: ಮಹಾರಾಷ್ಟ್ರದ ಠಾಣೆಯಲ್ಲಿ 14 ವರ್ಷಗಳ ಹಿಂದೆ ರಸ್ತೆ ಅಪಘಾತಕ್ಕೊಳಗಾಗಿದ್ದ ವ್ಯಕ್ತಿಯೊಬ್ಬರಿಗೆ ₹41.71 ಲಕ್ಷ ಪರಿಹಾರ ನೀಡುವಂತೆ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ(ಎಮ್‌ಎಸಿಟಿ) ಆದೇಶಿಸಿದೆ.
ಅಪಘಾತಕ್ಕೆ ಕಾರಣವಾದ ಟ್ರಕ್‌ನ ಮಾಲೀಕ ಮತ್ತು ವಿಮಾ ಕಂಪನಿಯು ಒಟ್ಟಾಗಿ ಪರಿಹಾರ ಮೊತ್ತವನ್ನು ನೀಡಬೇಕು ಎಂದು ಎಮ್‌ಎಸಿಟಿ ಸದಸ್ಯ ಆರ್.ವಿ. ಮೋಹಿತೆ ಅವರು ಮಂಗಳವಾರ ಆದೇಶಿಸಿದ್ದಾರೆ.
ಮಹಾರಾಷ್ಟ್ರ ಠಾಣೆಯ ಭಿವಂಡಿ ನಿವಾಸಿ ಮೋನೇಶ್ ಅಲಿಯಾಸ್ ಮನೀಷ್ ವಿಜಯ್ ಸುತಾರ್ ಅವರಿಗೆ 12 ವರ್ಷ ವಯಸ್ಸಿನಲ್ಲಿರುವಾಗ ಅಪಘಾತ ಸಂಭವಿಸಿತ್ತು. 2011 ಮೇ 8ರಂದು ಮೋನೇಶ್ ತಮ್ಮ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಟ್ರಕ್‌ವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಮೋನೇಶ್ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದರು.
ಟ್ರಕ್‌ನ ಚಕ್ರವು ಮೋನೇಶ್ ಸೊಂಟದಿಂದ ಕೆಳಭಾಗದ ಮೇಲೆ ಹರಿದ ಕಾರಣ ಮುಖ್ಯ ಅಂಗಾಂಗಳಿಗೆ ಹಾನಿಯಾಗಿತ್ತು. ಸಂತಾನೋತ್ಪತಿಗೆ ಅಗತ್ಯವಾದ ಅಂಗಕ್ಕೂ ಹಾನಿಯಾಗಿರುವ ಕಾರಣ ಭವಿಷ್ಯದಲ್ಲಿ ಮಕ್ಕಳನ್ನು ಪಡೆಯಲು ಸಾಧ್ಯವಿಲ್ಲ ಮತ್ತು ಹಲವು ಸಮಸ್ಯೆಗಳೂ ಕಾಣಿಸಕೊಳ್ಳುತ್ತವೆ ಎಂದು ವೈದ್ಯರು ತಿಳಿಸಿದ್ದರು.
ಟ್ರಕ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದಕ್ಕೆ ಸಾಕ್ಷ್ಯಗಳು ಇವೆ. ಅಪಘಾತಕ್ಕೊಳಗಾದ ವ್ಯಕ್ತಿಗೆ ವೈವಾಹಿಕ ಜೀವನ ನಡೆಸಲು ಸಾಧ್ಯವಾಗದೇ ಇರುವುದಕ್ಕೆ ₹ 3 ಲಕ್ಷ ಸೇರಿದಂತೆ ಒಟ್ಟು ₹41,71,520 ಹಣವನ್ನು ಪರಿಹಾರವಾಗಿ ನೀಡುವಂತೆ ನ್ಯಾಯಮಂಡಳಿ ಆದೇಶಿಸಿದೆ.
*ದೂರುದಾರರು 12 ವರ್ಷ ವಯಸ್ಸಿನಲ್ಲಿದ್ದಾಗ ಅಪಘಾತ
* ದೂರುದಾರರ ತಂದೆ ಸ್ಥಳದಲ್ಲೇ ಸಾವು
* ಟ್ರಕ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ




