HEALTH TIPS

ಮಸ್ಕ್-ಟ್ರಂಪ್ ಬೀದಿ ಜಗಳ: ಟೆಸ್ಲಾ ಷೇರು ಮೌಲ್ಯ ದಾಖಲೆಯ ಶೇ 14ರಷ್ಟು ಕುಸಿತ

 ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಇಲಾನ್ ಮಸ್ಕ್ ಅವರ ಸರ್ಕಾರಿ ಒಪ್ಪಂದಗಳನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಅಧ್ಯಕ್ಷೀಯ ಚುನಾವಣೆ ಮತ್ತು ಅದಕ್ಕಿಂತಲೂ ಹಿಂದಿನಿಂದಲೂ ಡೊನಾಲ್ಡ್ ಟ್ರಂಪ್ ಅವರ ಬೆಂಬಲಕ್ಕೆ ನಿಂತಿದ್ದ ಮಸ್ಕ್, ಡೊನಾಲ್ಡ್ ಟ್ರಂಪ್ ಗೆದ್ದ ಬಳಿಕ ಶ್ವೇತಭವನದಲ್ಲೂ ಪ್ರಮುಖ ಹುದ್ದೆ ಗಿಟ್ಟಿಸಿದ್ದರು.


ಈಗ ಅವರಿಬ್ಬರ ನಡುವಿನ ಸ್ನೇಹ ಮುರಿದುಬಿದ್ದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಪರಸ್ಪರ ಟೀಕೆಗೈಯುತ್ತಿದ್ದಾರೆ. ಈ ನಡುವೆ ಮಸ್ಕ್ ಅವರಿಗೆ ಆರ್ಥಿಕವಾಗಿ ಪೆಟ್ಟು ಕೊಡಲು ಸರ್ಕಾರದ ಜೊತೆಗಿನ ಮಸ್ಕ್ ಒಪ್ಪಂದಗಳನ್ನು ರದ್ದುಮಾಡಲು ಟ್ರಂಪ್ ಮುಂದಾಗಿದ್ದಾರೆ.

ಶ್ವೇತಭವನದಲ್ಲಿ ಟ್ರಂಪ್-ಮಸ್ಕ್ ಒಟ್ಟಿಗೆ ಕಾಣಿಸಿಕೊಂಡು ವಾರ ಕಳೆಯುವಷ್ಟರಲ್ಲಿ ಈ ಭಿನ್ನಮತ ಕಾಣಿಸಿಕೊಂಡಿದೆ. ಅಮೆರಿಕ ಸರ್ಕಾರದ ಹುದ್ದೆ ನಿರ್ವಹಿಸಿದ್ದ ಕಡಿಮೆ ಸಮಯದಲ್ಲಿ ಮಸ್ಕ್ ಅವರ ಪಾತ್ರವನ್ನು ಟ್ರಂಪ್ ಶ್ಲಾಘಿಸಿದ್ದರು.

ಟ್ರಂಪ್ ಅವರ ತೆರಿಗೆ ಕಡಿತ ಮತ್ತು ಖರ್ಚು ಮಸೂದೆಯನ್ನು ಖಂಡಿಸಿ, ಮಸ್ಕ್ ಕಳೆದ ಕೆಲವು ದಿನಗಳಿಂದ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಟೀಕಿಸುತ್ತಿದ್ದಾಗಲೂ ಟ್ರಂಪ್ ಮೌನವಾಗಿದ್ದರು. ಆದರೆ, ಟ್ರಂಪ್ ಗುರುವಾರ ಓವಲ್ ಕಚೇರಿಯಲ್ಲಿ ಈ ಸಂಬಂಧ ಮೌನ ಮುರಿದರು. ತಮ್ಮ ಹಳಸಿದ ಸಂಬಂಧದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮಸ್ಕ್‌ ಅವರಿಂದ ತುಂಬಾ ನಿರಾಶೆಗೊಂಡಿದ್ದೇನೆ ಎಂದೂ ಹೇಳಿದ್ದರು.

ಇದಕ್ಕೆ ಅದೇ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮಸ್ಕ್ ಪ್ರತಿಕ್ರಿಯಿಸಿದ್ದರು. ಬಳಿಕ, ಟ್ರಂಪ್ ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ, ಮಸ್ಕ್ ಅವರ ಇಂಟರ್ನೆಟ್ ಕಂಪನಿ ಸ್ಟಾರ್‌ಲಿಂಕ್ ಮತ್ತು ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್‌ನ ಆದಾಯಕ್ಕೆ ಕೊಕ್ಕೆ ಹಾಕಲು ಅಮೆರಿಕ ಸರ್ಕಾರವನ್ನು ಬಳಸುವುದಾಗಿ ಬೆದರಿಕೆ ಹಾಕಿದ್ದಾರೆ.

'ನಮ್ಮ ಬಜೆಟ್‌ನಲ್ಲಿ ಶತಕೋಟಿ ಡಾಲರ್‌ನಷ್ಟು ಹಣ ಉಳಿಸಲು ಸುಲಭವಾದ ಮಾರ್ಗವೆಂದರೆ, ಇಲಾನ್ ಮಸ್ಕ್ ಅವರಿಗೆ ಸರ್ಕಾರ ನೀಡುತ್ತಿರುವ ಸಬ್ಸಿಡಿ ಮತ್ತು ಒಪ್ಪಂದಗಳನ್ನು ಕೊನೆಗೊಳಿಸುವುದು'ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಬರೆದಿದ್ದಾರೆ. ಹಿಂದಿನ ಅಧ್ಯಕ್ಷ ಬೈಡನ್ ಅದನ್ನು ಮಾಡದಿರುವುದು ನನಗೆ ಆಶ್ಚರ್ಯವನ್ನುಂಟುಮಾಡಿತ್ತು! ಎಂದೂ ಹೇಳಿದ್ದಾರೆ.

ಇದಕ್ಕೆ ಎಕ್ಸ್‌ನಲ್ಲಿ ಉತ್ತರಿಸಿದ ಮಸ್ಕ್, ಇದು ದಿನದಿಂದ ದಿನಕ್ಕೆ ಮತ್ತಷ್ಟು ಉತ್ತಮಗೊಳ್ಳುತ್ತಿದೆ. ಮುಂದುವರಿಯಿರಿ, ನನ್ನ ದಿನವನ್ನಾಗಿಸಿ ಎಂದು ಹೇಳಿದ್ದಾರೆ.

ಈ ಹಿಂದೆ ಅವರಿಬ್ಬರ ನಡುವಿನ ಸ್ನೇಹ ಹೇಗೆ ವೇಗವಾಗಿ, ಸಾರ್ವಜನಿಕವಾಗಿ ಪ್ರಾರಂಭವಾಯಿತೋ ಅಷ್ಟೇ ವೇಗವಾಗಿ ಕುಸಿದಿದೆ ಎಂದು ವರದಿ ತಿಳಿಸಿದೆ.

ಟ್ರಂಪ್ ಬೆದರಿಕೆ ಬೆನ್ನಲ್ಲೇ ಮಸ್ಕ್ ಅವರ ಎಲೆಕ್ಟ್ರೀಕ್ ಕಾರು ಉತ್ಪಾದಕ ಕಂಪನಿ ಟೆಸ್ಲಾ ಕಂಪನಿಯ ಷೇರುಗಳ ಮೌಲ್ಯ ಶೇ 14ರಷ್ಟು ಕುಸಿದಿದ್ದು, 153 ಬಿಲಿಯನ್ ಡಾಲರ್ ನಷ್ಟ ಕಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries