ಜೈಪುರ: ಭಾನುವಾರ ಮುಂಜಾನೆ ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಪೈಲಟ್ ರಾಜವೀರ್ ಸಿಂಗ್ ಚೌಹಾಣ್, ಭಾರತೀಯ ಸೇನೆಯಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ವಿವಿಧ ಭೂಪ್ರದೇಶಗಳಲ್ಲಿ ಹಾರಾಟ ನಡೆಸಿದ್ದ ಅನುಭವ ಹೊಂದಿದ್ದರು ಎಂದು ವರದಿ ತಿಳಿಸಿದೆ.
ಜೈಪುರದ ಶಾಸ್ತ್ರಿ ನಗರದ ನಿವಾಸಿಯಾಗಿರುವ ಚೌಹಾಣ್, 2024ರ ಅಕ್ಟೋಬರ್ ತಿಂಗಳಿನಿಂದ ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿದ್ದರು.
ಉತ್ತರಾಖಂಡದ ಗೌರಿಕುಂಡ್ ಬಳಿ ಭಾನುವಾರ ಬೆಳಿಗ್ಗೆ ಅಪಘಾತಕ್ಕೀಡಾದ ಬೆಲ್ 407 ಹೆಲಿಕಾಪ್ಟರ್‌ನ ಕ್ಯಾಪ್ಟನ್ ಆಗಿ ಚೌಹಾಣ್ ಕೆಲಸ ಮಾಡುತ್ತಿದ್ದರು. ಅಪಘಾತದಲ್ಲಿ ಅವರು ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ.
ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದ ಚೌಹಾಣ್, ವಿಭಿನ್ನ ಪ್ರದೇಶಗಳಲ್ಲಿ ಹಾರಾಟ ನಡೆಸಿದ, ವೈಮಾನಿಕ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಿದ ಮತ್ತು ವಿವಿಧ ರೀತಿಯ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸಿದ್ದ ಅನುಭವ ಹೊಂದಿದ್ದರು ಎಂದು ಅವರ ಲಿಂಕ್ಡ್‌ಇನ್ ಪ್ರೊಫೈಲ್ ತಿಳಿಸಿದೆ.
ಕೇದಾರನಾಥ ಬಳಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಜೈಪುರ ನಿವಾಸಿ ಪೈಲಟ್ ರಾಜ್‌ವೀರ್ ಸಿಂಗ್ ಚೌಹಾಣ್ ಸೇರಿದಂತೆ ಏಳು ಜನರ ಸಾವು ಅತ್ಯಂತ ದುಃಖಕರ ಸಂಗತಿಯಾಗಿದೆ. ಈ ಕಷ್ಟದ ಸಮಯದಲ್ಲಿ ಮೃತರ ಕುಟುಂಬಗಳಿಗೆ ನನ್ನಸಂತಾಪಗಳು ಎಂದು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಎಕ್ಸ್ ಪೋಸ್ಟ್‌ನಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.




