ಪತ್ತನಂತಿಟ್ಟ: ಕಳೆದ ಹಣಕಾಸು ವರ್ಷದಲ್ಲಿ ಕೇರಳದಲ್ಲಿ ಮದ್ಯ ಮಾರಾಟ 19,561 ಕೋಟಿ ರೂ.ಗಳಾಗಿದ್ದು, 2022-23ರಲ್ಲಿ ಇದು 18,511 ಕೋಟಿ ರೂ.ಗಳಷ್ಟಿತ್ತು.
ರಾಜ್ಯ ಖಜಾನೆಗೆ ಮದ್ಯ ಮಾರಾಟದ ಮೇಲೆ ತೆರಿಗೆಯಾಗಿ 16,610 ಕೋಟಿ ರೂ.ಗಳು ಬಂದಿವೆ. 2022-23ರಲ್ಲಿ ಇದು 16,190 ಕೋಟಿ ರೂ.ಗಳಾಗಿತ್ತು.
ರಾಜ್ಯದಲ್ಲಿ ಮಾರಾಟವಾಗುವ ಮದ್ಯದ ಶೇಕಡಾ 80 ರಷ್ಟು ವಿವಿಧ ರಾಜ್ಯಗಳಿಂದ ಬಂದರೂ, ಇಲ್ಲಿ ಕೇವಲ 20% ಮಾತ್ರ ಉತ್ಪಾದಿಸಲಾಗುತ್ತದೆ.
ರಾಜ್ಯದಲ್ಲಿ 19 ಮದ್ಯ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಎರಡು ಸರ್ಕಾರಿ ನಿಯಂತ್ರಿತವಾಗಿದ್ದು, ಒಂದು ಸಾರ್ವಜನಿಕ ವಲಯದಲ್ಲಿದೆ. ತಿರುವಲ್ಲಾದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಸ್ವಾಮ್ಯದ ಟ್ರಾವಂಕೂರ್ ಶುಗರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್, 115.06 ಕೋಟಿ ರೂ.ಗಳ ಮದ್ಯವನ್ನು ಉತ್ಪಾದಿಸಿದೆ. ಒಟ್ಟು 2.28 ಕೋಟಿ ಕೇಸ್‍ಗಳಷ್ಟು ಭಾರತೀಯ ನಿರ್ಮಿತ ವಿದೇಶಿ ಮದ್ಯ, 1.09 ಕೋಟಿ ಕೇಸ್‍ಗಳಷ್ಟು ಬಿಯರ್ ಮತ್ತು 2.34 ಕೇಸ್‍ಗಳಷ್ಟು ವೈನ್ ಉತ್ಪಾದಿಸಲಾಗಿದೆ ಎಂದು ಅಂದಾಜಿಸಲಾಗಿದೆ.
ಕಳೆದ ಎರಡು ವರ್ಷಗಳ ಅಂಕಿಅಂಶಗಳ ಪ್ರಕಾರ, ಬಿಯರ್ ಮಾರಾಟ ತೀವ್ರವಾಗಿ ಕುಸಿದಿದೆ ಮತ್ತು ವಿದೇಶಿ ಮದ್ಯ ಮಾರಾಟ ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗಿದೆ. ವರದಿಯು ಬಿಯರ್ ಸೇವನೆಯು 8.6% ರಷ್ಟು ಕಡಿಮೆಯಾಗಿದೆ ಎಂದು ತೋರಿಸುತ್ತದೆ. 10 ಲಕ್ಷ ಕೇಸ್‍ಗಳು(ಪೆಟ್ಟಿಗೆ) ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ.
ಕೇರಳದಲ್ಲಿ, ಕ್ರಿಸ್‍ಮಸ್, ಹೊಸ ವರ್ಷ, ಓಣಂ ಮತ್ತು ವಿಷು ಮುಂತಾದ ಹಬ್ಬದ ಋತುಗಳಲ್ಲಿ ಮದ್ಯ ಮಾರಾಟವು ಅತ್ಯಧಿಕವಾಗಿದೆ. 3.34 ಕೋಟಿ ಕೇರಳಿಗರಲ್ಲಿ 29.8 ಲಕ್ಷ ಪುರುಷರು ಮತ್ತು 3.1 ಲಕ್ಷ ಮಹಿಳೆಯರು ಮದ್ಯ ಸೇವಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಪ್ರತಿದಿನ ಮದ್ಯ ಸೇವಿಸುವವರ ಸಂಖ್ಯೆ ಸುಮಾರು ಐದು ಲಕ್ಷ.
ಬಿವರೇಜಸ್ ನಿಗಮದ ಒಡೆತನದ 277 ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ರಾಜ್ಯದಲ್ಲಿ ಮದ್ಯ ಮಾರಾಟವಾಗುತ್ತದೆ. ಇದಲ್ಲದೆ, ಕನ್ಸ್ಯೂಮರ್‍ಫೆಡ್ ಅಡಿಯಲ್ಲಿ 39 ಮಳಿಗೆಗಳಿವೆ.
ಬಿವರೇಜಸ್ ನಿಗಮವು ಎರ್ನಾಕುಳಂ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, 36 ಮಳಿಗೆಗಳನ್ನು ಹೊಂದಿದೆ. ಅತಿ ಕಡಿಮೆ ಮಳಿಗೆಗಳು ವಯನಾಡ್ ಜಿಲ್ಲೆಯಲ್ಲಿದ್ದು, ಕೇವಲ 6 ಮಳಿಗೆಗಳನ್ನು ಹೊಂದಿದೆ.





