ಕರಾಚಿ: ಪಾಕಿಸ್ತಾನದಲ್ಲಿ ಸರಣಿ ಭೂಕಂಪಗಳು ಸಂಭವಿಸಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಜೈಲಿನಲ್ಲಿದ್ದ ಕೈದಿಗಳನ್ನು ಸ್ಥಳಾಂತರಿಸುವಾಗ ಉಂಟಾದ ಅವ್ಯವಸ್ಥೆ ವೇಳೆ ಕನಿಷ್ಠ 216 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
ಕರಾಚಿಯ ಮಾಲಿರ್ ಜೈಲಿನಲ್ಲಿ ಸೋಮವಾರ ರಾತ್ರಿ ನಡೆದ ಈ ಘಟನೆಯಲ್ಲಿ ಒಬ್ಬ ಕೈದಿ ಮೃತಪಟ್ಟು, ಮೂವರು ಅರೆಸೈನಿಕ ಸಿಬ್ಬಂದಿ ಮತ್ತು ಓರ್ವ ಜೈಲು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಕಳೆದ 24 ಗಂಟೆಗಳಲ್ಲಿ ಕರಾಚಿಯಲ್ಲಿ ಸರಣಿ ಭೂಕಂಪ ಸಂಭವಿಸಿವೆ. ಈ ವೇಳೆ 600ಕ್ಕೂ ಹೆಚ್ಚು ಕೈದಿಗಳನ್ನು ಬ್ಯಾರಕ್‌ಗಳಿಂದ ಹೊರಗೆ ಕರೆದೊಯ್ಯಲಾಗಿತ್ತು. ಪರಿಸ್ಥಿತಿಯ ಲಾಭ ಪಡೆದ 216 ಮಂದಿ ಕೈದಿಗಳು ಪರಾರಿಯಾಗಿದ್ದಾರೆ ಎಂದು ಜೈಲು ಸೂಪರಿಂಟೆಂಡೆಂಟ್ ಅರ್ಷದ್ ಶಾ ತಿಳಿಸಿದ್ದಾರೆ.
80ಕ್ಕೂ ಹೆಚ್ಚು ಕೈದಿಗಳನ್ನು ಮರಳಿ ವಶಕ್ಕೆ ಪಡೆಯಲಾಗಿದೆ. 135ಕ್ಕೂ ಹೆಚ್ಚು ಕೈದಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.
ಘಟನೆಯ ಸಮಯದಲ್ಲಿ ಮಾಲಿರ್ ಜೈಲಿನಲ್ಲಿ 6,000ಕ್ಕೂ ಹೆಚ್ಚು ಕೈದಿಗಳಿದ್ದರು. ಅವರಲ್ಲಿ ಹೆಚ್ಚಿನವರು ಮಾದಕವಸ್ತು ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಜೈಲು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಪಾಕಿಸ್ತಾನ ಭೂಕಂಪ ಮಾಪನಶಾಸ್ತ್ರ ಕೇಂದ್ರದ ಪ್ರಕಾರ, ಭಾನುವಾರದಿಂದ ಕರಾಚಿಯಲ್ಲಿ 16 ಲಘು ಭೂಕಂಪ ಸಂಭವಿಸಿವೆ ಎಂದು ವರದಿಯಾಗಿದೆ.




