ನವದೆಹಲಿ: ಮೆಮು ರೈಲುಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸುವುದೂ ಸೇರಿದಂತೆ ರೈಲ್ವೆಯ ಅಧುನೀಕರಣದ ನಿಟ್ಟಿನಲ್ಲಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ತಿಳಿಸಿದ್ದಾರೆ.
'ಈಗ ಇರುವ ಮೆಮು ರೈಲುಗಳು 8ರಿಂದ 12 ಬೋಗಿಗಳನ್ನು ಒಳಗೊಂಡಿದ್ದು, 16ರಿಂದ 20 ಬೋಗಿಗಳಿಗೆ ಹೆಚ್ಚಿಸಲಾಗುವುದು.
ರೈಲು ಬೋಗಿಗಳ ನಿರ್ಮಾಣಕ್ಕೆ ಆಂಧ್ರಪ್ರದೇಶದ ಕಾಜಿಪೇಟ್‌ನಲ್ಲಿ ಹೊಸ ಕಾರ್ಖಾನೆ ಸ್ಥಾಪಿಸಲಾಗಿದೆ' ಎಂದು ಹೇಳಿದರು.
ನಮೋ ಭಾರತ್ ರೈಲುಗಳನ್ನು ಉಲ್ಲೇಖಿಸಿ, 'ನಮೋ ಭಾರತ್ ರೈಲುಗಳಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನ ದೊರೆತಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಇನ್ನೂ 50 ಹೊಸ ನಮೋ ಭಾರತ್ ರೈಲುಗಳ ಸಂಚಾರ ಆರಂಭಿಸಲು ಸರ್ಕಾರ ನಿರ್ಧರಿಸಿದೆ' ಎಂದರು.
'ಮೂರು ಅಮೃತ್ ಭಾರತ್ ರೈಲುಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಮುಂಬರುವ ದಿನಗಳಲ್ಲಿ ಇನ್ನೂ ಆರು ಅಮೃತ್ ಭಾರತ್ ರೈಲುಗಳ ಸಂಚಾರ ಪ್ರಾರಂಭಿಸಲಾಗುವುದು. 50 ಹೊಸ ರೈಲುಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ' ಎಂದು ಮಾಹಿತಿ ನೀಡಿದರು.

