HEALTH TIPS

ಜುಲೈ 21ರಿಂದ ಸಂಸತ್‌ನ ಮುಂಗಾರು ಅಧಿವೇಶನ

ನವದೆಹಲಿ: ಸಂಸತ್‌ನ ಮುಂಗಾರು ಅಧಿವೇಶನ ಜುಲೈ 21ರಿಂದ ಆಗಸ್ಟ್‌ 12ರ ವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಬುಧವಾರ ಹೇಳಿದ್ದಾರೆ.

ಮುಂಗಾರು ಅಧಿವೇಶನ ನಡೆಯುವ ದಿನಗಳನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ಸಂಸದೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು ಅಂತಿಮಗೊಳಿಸಿದೆ ಎಂದೂ ಅವರು ಹೇಳಿದ್ದಾರೆ.

'ಎಲ್ಲ ಮಹತ್ವದ ವಿಚಾರಗಳ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡಬಹುದು' ಎಂದು ರಿಜಿಜು, 'ಪ್ರತಿಯೊಂದು ಅಧಿವೇಶನವೂ ವಿಶೇಷ ಅಧಿವೇಶನವಾಗಿದೆ' ಎಂದು ಹೇಳಿದ್ದಾರೆ.

ಈ ಮೂಲಕ, ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ, ಆಪರೇಷನ್ ಸಿಂಧೂರ ಹಾಗೂ ನಂತರದ ಬೆಳವಣಿಗೆಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು ಎಂಬ ವಿಪಕ್ಷಗಳ ಒಕ್ಕೂಟ 'ಇಂಡಿಯಾ'ದ ಬೇಡಿಕೆಯನ್ನು ಕೇಂದ್ರ ಸರ್ಕಾರ ಬಹುತೇಕ ತಿರಸ್ಕರಿಸಿದಂತೆ ಆಗಿದೆ.

ಮುಂಗಾರು ಅಧಿವೇಶನ ಆರಂಭವಾಗುವುದಕ್ಕೂ 48 ದಿನ ಮೊದಲೇ ಈ ಕುರಿತ ಘೋಷಣೆ ಹೊರಬಿದ್ದಿರುವುದು ಅಸಾಮಾನ್ಯ ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನೊಂದೆಡೆ, ವಿಶೇಷ ಅಧಿವೇಶನಕ್ಕೆ ಆಗ್ರಹಿಸಿ 'ಇಂಡಿಯಾ' ಒಕ್ಕೂಟವು 16 ಸಂಸದರ ಸಹಿವುಳ್ಳ ಪತ್ರ ಬರೆದಿತ್ತು. ಈಗ, 300 ಸಂಸದರಿಂದ ಪತ್ರಗಳನ್ನು ಬರೆಸಲು ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ಒಟ್ಟು 17 ದಿನ ನಡೆಯಲಿರುವ ಕಲಾಪದಲ್ಲಿ, ಆಪರೇಷನ್‌ ಸಿಂಧೂರ, ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ವಿರುದ್ಧ ವಾಗ್ದಂಡನೆ ಆರಂಭಿಸುವ ಕುರಿತು ಚರ್ಚಿಸಲಾಗುತ್ತದೆ.

ಜಾತಿ ಜನಗಣತಿ ಘೋಷಣೆ ಮಾಡಿರುವ ಶ್ರೇಯವನ್ನು ತನ್ನದಾಗಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗುವ ಸಾಧ್ಯತೆ ಇದೆ. ವರ್ಷಾಂತ್ಯಕ್ಕೆ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಕಾರಣ, ಕೇಂದ್ರ ಸರ್ಕಾರದಿಂದ ಇಂತಹ ನಡೆ ನಿರೀಕ್ಷಿತ ಎನ್ನಲಾಗುತ್ತಿದೆ.

ಟಿಎಂಸಿ ಟೀಕೆ: ಮುಂಗಾರು ಅಧಿವೇಶನ ನಡೆಯುವ ಬಗ್ಗೆ ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಟಿಎಂಸಿಯ ರಾಜ್ಯಸಭಾ ಸದಸ್ಯ ಡೆರೆಕ್‌ ಒಬ್ರಯಾನ್,'ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಸಂಸತ್‌ನಲ್ಲಿ ವಿಪಕ್ಷಗಳನ್ನು ಎದುರಿಸಲು ಹೆದರುತ್ತಿದೆ. ಹೀಗಾಗಿ ವಿಶೇಷ ಅಧಿವೇಶನ ಕರೆಯುತ್ತಿಲ್ಲ' ಎಂದು ಟೀಕಿಸಿದ್ದಾರೆ.

ಡೆರೆಕ್‌ ಒಬ್ರಯಾನ್, ಟಿಎಂಸಿಯ ರಾಜ್ಯಸಭಾ ಸಂಸದಜುಲೈನಲ್ಲಿ ಮುಂಗಾರು ಅಧಿವೇಶನ ಕರೆಯಬಹುದಾದಲ್ಲಿ ಕೇಂದ್ರ ಸರ್ಕಾರ ಜೂನ್‌ನಲ್ಲಿ ವಿಶೇಷ ಅಧಿವೇಶನ ಏಕೆ ಕರೆಬಾರದು?.

'ಕೇಂದ್ರ ಸರ್ಕಾರ ಪಲಾಯನ ಮಾಡುತ್ತಿದ್ದು, ಅದರ ಈ ಸ್ಥಿತಿಗೆ ನಾನು 'ಪಾರ್ಲಿಮೆಂಟೊಫೋಬಿಯಾ' ಎನ್ನುತ್ತೇನೆ' ಎಂದು ಅವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಾಮಾನ್ಯವಾಗಿ ಅಧಿವೇಶನ ಆರಂಭವಾಗುವ 20 ದಿನಗಳಿಗೂ ಮೊದಲು ಆ ಕುರಿತು ಘೋಷಣೆ ಮಾಡಲಾಗುತ್ತದೆ. ಈಗ ಬಹಳ ಮುಂಚಿತವಾಗಿಯೇ ಘೋಷಿಸಲಾಗಿದೆ. ಆದರೆ, ಇದರಿಂದ, ವಿಶೇಷ ಅಧಿವೇಶನ ಕರೆಯಬೇಕು ಎಂಬ ತಮ್ಮ ನಿಲುವಿನಿಂದ ವಿಪಕ್ಷಗಳು ಹಿಂದೆ ಸರಿಯವು' ಎಂದಿದ್ದಾರೆ.

ಬಿರುಸಿನ ಚರ್ಚೆ ಸಾಧ್ಯತೆ

ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಸಶಸ್ತ್ರ ಪಡೆಗಳು ಮೇ 7ರಿಂದ 10ರವರೆಗೆ 'ಆಪರೇಷನ್‌ ಸಿಂಧೂರ' ನಡೆಸಿದವು. ಮೇ 10ರಂದು ಕದನ ವಿರಾಮ ಘೋಷಣೆಯಾಯಿತು. ಈ ವಿಚಾರಗಳೇ ಮುಂಗಾರು ಅಧಿವೇಶನದಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗಲಿವೆ. ಭದ್ರತೆಯಲ್ಲಿ ಲೋಪ ದಿಢೀರ್‌ನೆ ಕದನ ವಿರಾಮ ಘೋಷಣೆ ಹಾಗೂ ತನ್ನದೇ ಮಧ್ಯಸ್ಥಿಕೆಯಿಂದಾಗಿ ಕದನ ವಿರಾಮ ಘೋಷಿಸಲಾಯಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪದೇಪದೇ ಹೇಳುತ್ತಿರುವುದು ಭಾರತೀಯ ಪಡೆಗಳಿಗೆ ಆಗಿರುವ ನಷ್ಟ ಕುರಿತು ಪ್ರಶ್ನೆಗಳನ್ನು ಕೇಳುವ ಮೂಲಕ ಸರ್ಕಾರಕ್ಕೆ ಚಾಟಿ ಬೀಸಲು ವಿಪಕ್ಷಗಳು ಸಜ್ಜಾಗಲಿವೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಎದಿರೇಟು ನೀಡುವುದು ನಿರೀಕ್ಷಿತ. ವಿರೋಧ ಪಕ್ಷಗಳು 'ಪಾಕಿಸ್ತಾನದ ಭಾಷೆ'ಯಲ್ಲಿ ಮಾತನಾಡುತ್ತಿವೆ ಎಂದು ಕೇಂದ್ರ ಚಾಟಿ ಬೀಸುವ ಸಾಧ್ಯತೆಯೂ ಇಲ್ಲದಿಲ್ಲ. ಉಗ್ರರ 9 ನೆಲೆಗಳ ನಾಶ ಪಾಕಿಸ್ತಾನ ಸೇನೆಯ ಮೂಲಸೌಕರ್ಯಗಳಿಗೆ ಹಾನಿ ಉಂಟು ಮಾಡಿರುವುದು ಸಿಂಧೂ ಜಲ ಒಪ್ಪಂದವನ್ನು ಅಮಾನತಿಲ್ಲಿಟ್ಟಿರುವುದು ಸೇರಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರವು ವಿಪಕ್ಷಗಳತ್ತ ಚಾಟಿ ಬೀಸುವ ಸಾಧ್ಯತೆಗಳೂ ಇವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries