ನವದೆಹಲಿ: ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಮೂಲಕ ಮೇ ತಿಂಗಳಲ್ಲಿ ದಾಖಲೆಯ ಗರಿಷ್ಠ ₹25.14 ಲಕ್ಷ ಕೋಟಿಗಳಷ್ಟು ವಹಿವಾಟು ನಡೆದಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಸೋಮವಾರ ತಿಳಿಸಿದೆ.
ಏಪ್ರಿಲ್ ತಿಂಗಳಲ್ಲಿ ಯುಪಿಐ ವಹಿವಾಟಿನ ಮೌಲ್ಯ ₹23.94 ಲಕ್ಷ ಕೋಟಿಯಷ್ಟಿತ್ತು.
ಇದಕ್ಕೆ ಹೋಲಿಸಿದರೆ ಶೇ 5ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ₹20.44 ಲಕ್ಷ ಕೋಟಿಗಳಷ್ಟಿತ್ತು ಎಂದು ತಿಳಿಸಿದೆ.
ಏಪ್ರಿಲ್‌ನಲ್ಲಿ 1,789.3 ಕೋಟಿ ವಹಿವಾಟುಗಳು ನಡೆದಿದ್ದರೆ, ಮೇ ತಿಂಗಳಲ್ಲಿ 1,867.7 ಕೋಟಿ ನಡೆದಿವೆ. ಈ ತಿಂಗಳಲ್ಲಿ ದೈನಂದಿನ ವಹಿವಾಟು ಮೌಲ್ಯ ಸರಾಸರಿ ₹81,106 ಕೋಟಿಯಾಗಿದೆ ಎಂದು ತಿಳಿಸಿದೆ.
'ಮೇ ತಿಂಗಳಲ್ಲಿ ₹25.14 ಲಕ್ಷ ಕೋಟಿ ಮೌಲ್ಯದ 1,868 ಕೋಟಿ ಯುಪಿಐ ವಹಿವಾಟು ನಡೆದಿದೆ. ಇದು ದಾಖಲೆಯ ಮೈಲುಗಲ್ಲಾಗಿದೆ. ಭಾರತದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಆದ್ಯತೆಯ ವಹಿವಾಟಿಗೆ ಇದು ಸಾಕ್ಷಿಯಾಗಿದೆ' ಎಂದು ಸ್ಪೈಸ್ ಮನಿ ಸಂಸ್ಥಾಪಕ ಮತ್ತು ಸಿಇಒ ದಿಲೀಪ್ ಮೋದಿ ತಿಳಿಸಿದ್ದಾರೆ.

