ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್ ಹಾಗೂ ಪರಿಸರದಲ್ಲಿ ಭಾರೀ ಮಳೆಯಿಂದ ಸುಮಾರು 25 ಕ್ಕೂ ಮಿಕ್ಕ ಮನೆಗಳು ಜಲಾವೃತಗೊಂಡು ಮನೆಯೊಳಗಿದ್ದ ದಾಖಲೆ ಪತ್ರಗಳು ವಿವಿಧ ಸಾಮಾಗ್ರಿಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳು ನಾಶಗೊಂಡಿದೆ.
ಮಂಜೇಶ್ವರ ಗ್ರಾಮ ಪಂಚಾಯತು ಅಧಿಕೃತರ ಅನಾಸ್ತವೇ ಇದಕ್ಕೆ ಮೂಲ ಕಾರಣವಾಗಿತ್ತು ಎಂದು ದೂರಲಾಗಿದೆ.
ಮಂಜೇಶ್ವರ ರೈಲ್ವೇ ಹಳಿಯ ಪರಿಸರದಲ್ಲಿರುವ ಸುರುಮ ತೋಡಿನಲ್ಲಿ ಭಾರೀ ಪ್ರಮಾಣದ ತ್ಯಾಜ್ಯಗಳು ತುಂಬಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಒಂದು ಗ್ರಾಮವೇ ನೆರೆ ಹಾನಿಗೊಳಗಾಗಬೇಕಾಯಿತು.
ಈ ಮಧ್ಯೆ ಗ್ರಾಮ ಪಂಚಾಯತಿ ಅಧಿಕೃತರು ತಿರುಗಿಯನೋಡದ ಹಿನ್ನೆಲೆಯಲ್ಲಿ ಆಕ್ರೋಶಿತರಾದ ಗ್ರಾಮಸ್ಥರು ಮಂಜೇಶ್ವರ ಫ್ಲಡ್ ವಿಕ್ಟಿಂಸ್ ಅಸೋಸಿಯೇಷನ್ ಎಂಬ ಸಂಘಟನೆಯನ್ನು ರೂಪೀಕರಿಸಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ.ೂ
ಕಳೆದ ಮೇ 29 ರಂದು ರಾತ್ರಿ ನಿದ್ರಿಸುತ್ತಿರುವ ಸಮಯದಲ್ಲಿ ಉಂಟಾದ ಭಾರೀ ಮಳೆಯ ಪರಿಣಾಮ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರೈಲ್ವೆ ನಿಲ್ದಾಣದ ಪಶ್ಚಿಮಭಾಗದಲ್ಲಿ ಹರಿಯುವ ಹಳ್ಳ ಮಲಿನತೆ ಭರಿತವಾಗಿದ್ದು, ಈ ಮಲಿನ ನೀರಿನ ಹರಿವಿಗೆ ಅಡೆತಡೆಯಾಗಿ ನೆರೆ ಉಂಟಾಗಿದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ. ಹಳ್ಳವನ್ನು ಶುದ್ಧಗೊಳಿಸುವತ್ತ ಮತ್ತು ಸಂರಕ್ಷಿಸುವತ್ತ ಪಂಚಾಯತಿ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಗಂಭೀರವಾಗಿ ಆಕ್ಷೇಪ ವ್ಯಕ್ತವಾಗಿದೆ.
ಮಳೆ ನಿಂತು ಹಲವು ದಿನಗಳಾದರೂ ವಾರ್ಡ್ ಸದಸ್ಯ ಅಥವಾ ಪಂಚಾಯತಿ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ನಿವಾಸಿಗಳು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಸುರಿದ ಭಾರೀ ಮಳೆಗೆ ಮತ್ತೆ ಮನೆಗಳು ಜಲಾವೃತಗೊಳ್ಳುತ್ತಿದ್ದಂತೆಯೇ ಫ್ಲಡ್ ವಿಕ್ಟಿಂಸ್ ಅಸೋಸಿಯೇಷನ್ ನ ನೇತೃತ್ವದಲ್ಲಿ ನೆರೆ ಸಂತ್ರಸ್ಥರು ಹಾಗೂ ಗ್ರಾಮಸ್ಥರು ಮಂಜೇಶ್ವರ ಗ್ರಾಮ ಪಂಚಾಯತಿ ಕಚೇರಿಗೆ ನುಗ್ಗಿ ಅಧಿಕಾರಿಗಳನ್ನು ಹಾಗೂ ಅಧ್ಯಕ್ಷೆಯನ್ನು ದಿಗ್ಬಂಧನಗೊಳಿಸಿ ತಹಸೀಲ್ದಾರರನ್ನು ಕರೆಸುವಂತೆ ಪಟ್ಟು ಹಿಡಿದು ಅವರನ್ನು ಕರೆಸಿ ಸಮಸ್ಯೆ ಇರುವ ಸ್ಥಳಕ್ಕೆ ಕರೆದೊಯ್ದು ಕೂಡಲೇ ಪರಿಹಾರ ಕಾಣುವಂತೆ ಒತ್ತಾಯಿಸಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮತ್ತೆ ಪ್ರತಿಭಟನೆಯ ತೀವ್ರತೆಯನ್ನು ಹೆಚ್ಚಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

.jpg)
