ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ತಲಪ್ಪಾಡಿಯಿಂದ ಮುಂದೆ ಕೇರಳಕ್ಕೆ ಹಾದುಹೋಗುವ ರಷ್ಟ್ರೀಯ ಹೆದ್ದಾರಿ 66ರ ಕಾಸರಗೋಡು ಜಿಲ್ಲೆಯಲ್ಲಿ ಅಳವಡಿಸುವ ಸೂಚನಾಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಅಳವಡಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಮೂಲಕ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಹೋರಾಟಕ್ಕೆ ಯಶಸ್ಸು ಲಭಿಸಿದಂತಾಗಿದೆ.
ಚೆರ್ಕಳದಿಂದ ತಲಪ್ಪಾಡಿ ವರೆಗಿನ ಮೊದಲ ರೀಚ್‍ನ ಷಟ್ಪಥ ಕಾಮಗಾರಿ ಪೂರ್ತಿಗೊಳ್ಳುತ್ತಿದ್ದಂತೆ ಗಡಿ ಪ್ರದೇಶ ತಲಪ್ಪಾಡಿಯಿಂದ ಹೆದ್ದಾರಿ ಬದಿ ಬೋರ್ಡ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಬೋರ್ಡಿನಲ್ಲಿರುವ ಬರವಣಿಗೆ ಮಲಯಾಳದೊಂದಿಗೆ ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಅಳವಡಿಸಲಾಗಿದ್ದು, ಕನ್ನಡ ಭಾಷೆಯನ್ನು ಹೊರತುಪಡಿಸಿರುವ ಬಗ್ಗೆ ಚೆನ್ನೈಯಲ್ಲಿರುವ ಕೇಂದ್ರ ಭಾಷಾ ಅಲ್ಪಸಂಖ್ಯಾತ ಸಚಿವಾಲಯದ ದಕ್ಷಿಣ ವಲಯ ಕಚೇರಿ ಸಹಾಯಕ ಆಯುಕ್ತರಿಗೂ ಮನವಿ ಸಲ್ಲಿಸಿತ್ತು.
ಹೆದ್ದಾರಿಯಲ್ಲಿ ಅಳವಡಿಸಿರುವ ಫಲಕಗಲ್ಲಿ ಕನ್ನಡ ನಾಪತ್ತೆಯಾಗಿರುವ ಬಗ್ಗೆ ಭಾರತ ಸರ್ಕಾರದ ಭಾಷ ಅಲ್ಪಸಂಖ್ಯಾತ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಇಲಾಖೆಯ ಸಹಾಯಕ ಆಯುಕ್ತ ಶಿವಕುಮಾರ್ ಅವರು ಕೇರಳ ಸರ್ಕಾರದ ಭಾಷಾ ಅಲ್ಪಸಂಖ್ಯಾತ ಇಲಾಖೆ ಕಾರ್ಯದರ್ಶಿಗೆ ಜೂ. 13ರಂದು ಪತ್ರ ಬರೆದು, ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಫಲಕಗಳನ್ನು ಗಡಿನಾಡು ಕಾಸರಗೋಡಲ್ಲಿ ಕಡ್ಡಾಯವಾಗಿ ಕನ್ನಡದಲ್ಲೂ ನಮೂದಿಸುವಂತೆ ಸೂಚನೆ ನೀಡಿದ್ದಾರೆ. ಗಡಿನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತ ನೀತಿಯನ್ನು ಪಾಲಿಸುವಂತೆ ಕೋರಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಿರುವನಂತಪುರದ ಅಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿತ್ತು.
ಕರ್ನಾಟಕದಿಂದ ಗಡಿನಾಡು ಕಾಸರಗೋಡಿನ ಅಚ್ಚಕನ್ನಡ ಪ್ರದೇಶ ಮಂಜೇಶ್ವರ ಭಾಗಕ್ಕೆ ಪ್ರವೇಶಿಸುತ್ತಿದ್ದಂತೆ ಇಲ್ಲಿನ ಹೆದ್ದಾರಿ ಬದಿ ಅಳವಡಿಸಿರುವ ಸೂಚನಾಫಲಕಗಳಲ್ಲಿ ಕನ್ನಡವನ್ನು ಹೊರತುಪಡಿಸಲಾಗಿದ್ದು, ಈ ಬಗ್ಗೆ ಕನ್ನಡಿಗರಿಂದ ಪ್ರಬಲ ವಿರೋಧ ವ್ಯಕ್ತವಾಗಿತ್ತು. ತಕ್ಷಣ ಸೂಚನಫಲಕಗಳಲ್ಲಿ ಕನ್ನಡ ಅಳವಡಿಸುವ ಮೂಲಕ ಗಡಿನಾಡ ಕನ್ನಡಿಗರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತೆ ಪ್ರಾಧಿಕಾರ ಅದ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಹಾಗೂ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ ಸಲ್ಲಿಸಿದ್ದ ಮನವಿಯಲ್ಲಿ ಒತ್ತಾಯಿಸಿದ್ದರು. ಸೂಚನಾಫಲಕಗಳಿಂದ ಕನ್ನಡ ಮರೆಯಾಗಿರುವ ಬಗ್ಗೆ 'ಸಮರಸ ಸುದ್ದಿ' ಇತ್ತೀಚೆಗೆ ಸಮಗ್ರ ವರದಿ ಪ್ರಕಟಿಸಿತ್ತು.


