ಕಳೆದ 14 ತಿಂಗಳುಗಳಲ್ಲಿ ಉತ್ತರ ಪ್ರದೇಶ ಮತ್ತು ಹರ್ಯಾಣದಿಂದ 20 ಕೋ.ರೂ.ಗೂ ಅಧಿಕ ಮೌಲ್ಯದ ಮುದ್ರಣ ಕಾಗದ ಮತ್ತು ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತಿಚೌರ್ಯ ಪಿಡುಗನ್ನು ನಿಗ್ರಹಿಸಲು ತೆಗೆದುಕೊಳ್ಳಲಾಗಿರುವ ಹಲವಾರು ಕ್ರಮಗಳಲ್ಲಿ ಪ್ರಮುಖ ಇ-ಕಾಮರ್ಸ್ ತಾಣಗಳಲ್ಲಿ ವಿತರಣಾ ಶುಲ್ಕವಿಲ್ಲದೆ ಎನ್‌ಸಿಇಆರ್‌ಟಿ ಪುಸ್ತಕಗಳ ಮಾರಾಟವೂ ಸೇರಿದೆ.
ಹಕ್ಕುಸ್ವಾಮ್ಯ ಕಾಯ್ದೆ,1957ರಡಿ ಕೃತಿಚೌರ್ಯವು ಸಂಜ್ಞೇಯ(ಗಂಭೀರ) ಅಪರಾಧವಾಗಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಆರಂಭದಲ್ಲಿ ಎನ್‌ಸಿಇಆರ್‌ಟಿ ಉ.ಪ್ರದೇಶ ಪೋಲಿಸರೊಂದಿಗೆ ಮುಝಫ್ಫರ್ನಗರದ ಗೋದಾಮೊಂದರ ಮೇಲೆ ದಾಳಿ ನಡೆಸಿ ಎರಡು ಕೋ.ರೂ.ಗೂ ಅಧಿಕ ಮೌಲ್ಯದ 1.5 ಲ.ಕ್ಕೂ ಹೆಚ್ಚು ನಕಲಿ ಪಠ್ಯಪುಸ್ತಕಗಳನ್ನು ವಶಪಡಿಸಿಕೊಂಡಿತ್ತು. ಈ ಪುಸ್ತಕಗಳನ್ನು ಒಂದು ಟ್ರಕ್ ಮತ್ತು ಎರಡು ಕಾರುಗಳಲ್ಲಿ ತುಂಬಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪ್ರಿಂಟಿಂಗ್ ಪ್ಲೇಟ್ಗಳೂ ಪತ್ತೆಯಾಗಿದ್ದವು. ಸ್ಥಳದಲ್ಲಿಯೇ ಎಂಟು ಜನರನ್ನು ಬಂಧಿಸಲಾಗಿತ್ತು ಎಂದು ಹೇಳಿಕೆಯು ತಿಳಿಸಿದೆ.
ಹರ್ಯಾಣದ ಸಮಲ್ಖಾದಲ್ಲಿಯ ಮುದ್ರಣಾಲಯವೊಂದರ ಮೇಲೂ ದಾಳಿ ನಡೆಸಲಾಗಿದ್ದು,ನಕಲಿ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಮುದ್ರಿಸಲು ಬಳಸಲಾಗುತ್ತಿದ್ದ ಭಾರೀ ಸಂಖ್ಯೆಯ ಪ್ರಿಂಟಿಂಗ್ ಪ್ಲೇಟ್ಗಳು,ಪುಸ್ತಕಗಳ ಪ್ರತಿಗಳು ಮತ್ತು ಯಂತ್ರೋಪಕರಣಗಳನ್ನು ವಶ ಪಡಿಸಿಕೊಳ್ಳಲಾಗಿತ್ತು. ನಕಲಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ತಯಾರಿಕೆ,ವಿತರಣೆ ಮತ್ತು ಮಾರಾಟ ಜಾಲದ ಹಿಂದಿನ ರೂವಾರಿಗಳನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿಕೆಯು ತಿಳಿಸಿದೆ.
ಎನ್‌ಸಿಇಆರ್‌ಟಿ ಕಾಗದದ ಗುಣಮಟ್ಟ ಮತ್ತು ಪಠ್ಯಪುಸ್ತಕಗಳ ಮುದ್ರಣದಲ್ಲಿ ಗಮನಾರ್ಹ ಸುಧಾರಣೆ,ಅವುಗಳ ಸಕಾಲಿಕ ಮುದ್ರಣ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯತೆಗಾಗಿ ಕ್ರಮಗಳನ್ನು ತೆಗೆದುಕೊಂಡಿದೆ. ಜೊತೆಗೆ ನಕಲಿ ಪಠ್ಯಪುಸ್ತಕಗಳ ಮುದ್ರಕರು,ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುತ್ತಿದೆ.
ಎನ್‌ಸಿಇಆರ್‌ಟಿ ವಾಟರ್ಮಾರ್ಕ್ನೊಂದಿಗೆ ಅಕ್ರಮವಾಗಿ ಕಾಗದವನ್ನು ಉತ್ಪಾದಿಸುತ್ತಿದ್ದ ಕಾಶಿಪುರದಲ್ಲಿಯ ಕಾಗದ ಕಾರ್ಖಾನೆಯ ವಿರುದ್ಧವೂ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.
ಐಐಟಿ ಕಾನ್ಪುರ ಅಭಿವೃದ್ಧಿಗೊಳಿಸಿರುವ ತಂತ್ರಜ್ಞಾನ ಆಧಾರಿತ ಕೃತಿಚೌರ್ಯ ನಿಗ್ರಹ ಕ್ಯೂಆರ್ ಕೋಡ್ನ್ನು ಒಂದು ವಿಷಯದ ಎನ್‌ಸಿಇಆರ್‌ಟಿ ಪಠ್ಯಪುಸ್ತಕದ 10 ಲ.ಪ್ರತಿಗಳಲ್ಲಿ ಅಳವಡಿಸಲಾಗಿದೆ ಮತ್ತು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲ ವಿಷಯಗಳ ಪಠ್ಯಪುಸ್ತಕಗಳಲ್ಲಿ ಇದನ್ನು ಅಳವಡಿಸಲಾಗುವುದು ಮತ್ತು ಕೃತಿಚೌರ್ಯ ಖದೀಮರು ಸುಲಭವಾಗಿ ನಕಲು ಮಾಡುವ ಹಳೆಯ ವಾಟರ್ಮಾರ್ಕ್ ಕಾಗದದ ಬಳಕೆಯನ್ನು ನಿಲ್ಲಿಸಲಾಗುವುದು ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.




