HEALTH TIPS

ಪುರಿ ಜಗನ್ನಾಥ ರಥಯಾ‍ತ್ರೆಯಲ್ಲಿ ಕಾಲ್ತುಳಿತ: 3 ಸಾವು, 50 ಜನರಿಗೆ ಗಾಯ

ಪುರಿ: ಒಡಿಶಾದ ಪುರಿ ಜಗನ್ನಾಥ ದೇಗುಲದ ರಥಯಾ‍ತ್ರೆ ವೇಳೆ ಗುಂಡಿಚ ದೇಗುಲದ ಬಳಿ ಇಂದು (ಭಾನುವಾರ) ಕಾಲ್ತುಳಿತ ಸಂಭವಿಸಿದ್ದು, ಮೂವರು ಭಕ್ತರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಥಯಾತ್ರೆ ವೀಕ್ಷಿಸಲು ಸಾವಿರಾರು ಭಕ್ತರು ದೇವಾಲಯದ ಬಳಿ ನೆರೆದಿದ್ದರು.

ಮುಂಜಾನೆ 4 ಗಂಟೆ ಸುಮಾರಿಗೆ ರಥಯಾತ್ರೆಗೆ ಬೇಕಾದ ಸಾಮಗ್ರಿಗಳನ್ನು ಹೊತ್ತ ಎರಡು ಟ್ರಕ್‌ಗಳು ಜಗನ್ನಾಥ, ದೇವಿ ಸುಭದ್ರ ಹಾಗೂ ಬಲಭದ್ರನ ರಥ‌ಗಳ ಬಳಿ ಬರುತ್ತಿದ್ದಂತೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಎಸ್. ಸ್ವೈನ್ ತಿಳಿಸಿದ್ದಾರೆ.

ಮೃತರನ್ನು ಬೋಲಾಗರ್‌ನ ಬಸಂತಿ ಸಾಹು ಮತ್ತು ಬಲಿಪಟ್ನದ ಪ್ರೇಮಕಾಂತ್ ಮೊಹಂತಿ ಮತ್ತು ಪ್ರವತಿ ದಾಸ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸಿದ್ಧಾರ್ಥ್ ವಿವರಿಸಿದ್ದಾರೆ.

'ಪುರಿ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 50 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ' ಎಂದೂ ಹೇಳಿದ್ದಾರೆ.

ಏತನ್ಮಧ್ಯೆ, ಒಡಿಶಾ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಅವರು ಘಟನೆಯ ಬಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಐತಿಹಾಸಿಕ ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಗೆ ಶುಕ್ರವಾರ ಅದ್ದೂರಿ ಚಾಲನೆ ದೊರೆಕಿತ್ತು. ಸಹಸ್ರಾರು ಭಕ್ತಾದಿಗಳು ರಥವನ್ನು ಎಳೆಯುತ್ತಾ 'ಜೈ ಜಗನ್ನಾಥ, ಹರಿ ಬೋಲ್‌' ಘೋಷಣೆಗಳನ್ನು ಮೊಳಗಿಸಿದ್ದರು.

ಶುಕ್ರವಾರ ಅತಿಯಾದ ಸೆಕೆ ಮತ್ತು ಕಿಕ್ಕಿರಿದ ಜನದಟ್ಟಣೆಯಿಂದಾಗಿ ಸುಮಾರು 625 ಮಂದಿ ಕುಸಿದು ಬಿದ್ದು, ಅಸ್ವಸ್ಥಗೊಂಡಿದ್ದರು.

'ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಲವರಿಗೆ ವಾಂತಿಯಾದರೆ ಮತ್ತೆ ಕೆಲವರು ನಿಶ್ಯಕ್ತಿಯಿಂದ ಬಳಲಿದ್ದರು. ಹಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ' ಎಂದು ಪುರಿ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಡಾ.ಕಿಶೋರ್‌ ಸತ್ಪತಿ ತಿಳಿಸಿದ್ದರು.

'ಲಕ್ಷಾಂತರ ಜನರು ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಸಿಲುಕಿಕೊಂಡಿದ್ದರು. ದಟ್ಟಣೆಯಿಂದ ಹೊರಬರಲು ಕೆಲವರು ಯತ್ನಿಸಿದ್ದು ಅಹಿತಕರ ಪರಿಸ್ಥಿತಿಗೆ ಕಾರಣವಾಯಿತು' ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದರು.

ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಾಗಿಯಾಗಿದ್ದ ಭಕ್ತರ ಮೇಲೆ ಅಗ್ನಿಶಾಮಕ ಸಿಬ್ಬಂದಿ ನೀರು ಹಾರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries