ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯು ದೇಶದ ಪಾಲಿಗೆ 'ಸುವರ್ಣಯುಗ' ಇದ್ದಂತೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸೋಮವಾರ ಹೇಳಿದ್ದಾರೆ.
ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಹ್ಯಾಟ್ರಿಕ್ ಅವಧಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮೋದಿ ಅವರು 2024ರ ಜೂನ್ 9ರಂದು ಮೂರನೇ ಅವಧಿಗೆ ಪ್ರಮಾಣ ಸ್ವೀಕರಿಸಿದ್ದರು.
ಮೋದಿ 3.0 ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಯಾದವ್, 'ಪ್ರಸ್ತುತ ಕಾಲಘಟ್ಟವು ಭಾರತದ ಸುವರ್ಣಯುಗವಾಗಿದೆ. ಮೋದಿ ಅವರು ಏನೆಲ್ಲ ಕೆಲಸಗಳನ್ನು ಮಾಡಿದ್ದಾರೋ ಅವು ಹಿಂದೆಂದೂ ಆಗಿರಲಿಲ್ಲ. ಮುಂದೆಯೂ ಅವುಗಳನ್ನು ಪುನರಾವರ್ತಿಸಲು ಸಾಧ್ಯವಿಲ್ಲ' ಎಂದಿದ್ದಾರೆ. ಹಾಗೆಯೇ, 'ಮೋದಿ 2029ರಲ್ಲಿ ಮತ್ತೆ ಪ್ರಧಾನಿಯಾಗಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಮೋದಿ ನಾಯಕತ್ವದಲ್ಲಿ ದೇಶವು ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ತನ್ನದೇ ಚಾಪು ಮೂಡಿಸುತ್ತಿದೆ' ಎಂದು ಪ್ರತಿಪಾದಿಸಿದ್ದಾರೆ.
ಜಾಗತಿಕ ಶಕ್ತಿಗಳ ನಡುವೆ ಸಮತೋಲನವನ್ನು ಸಾಧಿಸುವ ಮೂಲಕ ಪ್ರಧಾನಿಯವರು ರಷ್ಯಾದಿಂದ ಅಗ್ಗದ ದರದಲ್ಲಿ ಪೆಟ್ರೋಲ್ ಒದಗಿಸಿದ್ದಾರೆ. ಅದೇರೀತಿ, ಅಮೆರಿಕ ಮತ್ತು ಇಸ್ರೇಲ್‌ನಿಂದ ಸುಧಾರಿತ ರಕ್ಷಣಾ ತಂತ್ರಜ್ಞಾನವನ್ನು ದೇಶಕ್ಕೆ ತಂದಿದ್ದಾರೆ ಎಂದು ವಿವರಿಸಿದ್ದಾರೆ.
'ಇವೆಲ್ಲವೂ ಸಾಧ್ಯವಾಗಿದ್ದು, ಮೋದಿ ಅವರ ಧೈರ್ಯ ಹಾಗೂ ಸಾಮರ್ಥ್ಯದಿಂದ. ಹಾಗೆಯೇ, ಆಪರೇಷನ್ ಸಿಂಧೂರ ಮೂಲಕ ಅವರು ಚಮತ್ಕಾರವನ್ನೇ ಮಾಡಿದ್ದಾರೆ' ಎಂದು ಶ್ಲಾಘಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದರು. ಆ ವೇಳೆ 26 ಪ್ರವಾಸಿಗರು ಮೃತಪಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನಾ ಪಡೆಗಳು ಮೇ 7ರಂದು 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ್ದವು.




