ಕಾಸರಗೋಡು: ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಕಡಿಮೆ ಅಂಕ ಬಂದಿರುವುದರಿಂದ ಮರು ಮೌಲ್ಯಮಾಪನ ನಡೆಸಿದಾಗ ವಿದ್ಯಾರ್ಥಿನಿಯೊಬ್ಬಳಿಗೆ 36 ಹೆಚ್ಚುವರಿ ಅಂಕ ಲಭಿಸುವ ಮೂಲಕ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ನಗರದ ಚೆಮ್ನಾಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿನಿ ಆರ್.ತುಷಾರಾ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣಳಾದ ವಿದ್ಯಾರ್ಥಿನಿ.
ಉಳಿದ ಎಲ್ಲಾ ವಿಷಯಗಳಲ್ಲಿ 'ಎಪ್ಲಸ್'ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದ ವಿದ್ಯಾರ್ಥಿನಿಗೆ ವಿಜ್ಞಾನ ವಿಷಯದಲ್ಲಿ ಮಾತ್ರ ಕಡಿಮೆ ಅಂಕ ಲಭಿಸಿದ ಹಿನ್ನೆಲೆಯಲ್ಲಿ ಮರುಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ತುಷಾರಾಳ ಅತ್ಯಂತ ಆಸಕ್ತಿಯ ವಿಷಯವಾದ ವಿಜ್ಞಾನದಲ್ಲಿ ಕಡಿಮೆ ಅಂಕ ಬಂದಿರುವುದು ಸಂಶಯಕ್ಕೆ ಕಾರಣವಾಗಿದ್ದು, ಇದರಿಂದ ಶಿಕ್ಷಕರು ಹಾಗೂ ಹೆತ್ತವರು ಕೂಡಾ ಮರು ಮೌಲ್ಯಮಾಪನ ನಡೆಸಲು ವಿದ್ಯಾರ್ಥಿನಿಯನ್ನು ಪ್ರೇರೇಪಿಸಿದ್ದರು. ವಿಜ್ಞಾನದಲ್ಲಿ ತುಷಾರಾ 80ರಲ್ಲಿ 43ಅಂಕ ಮಾತ್ರ ಗಳಿಸಿದ್ದಳು. ಮರುಮೌಲ್ಯಮಾಪನದೊಂದಿಗೆ 36ಅಂಕಗಳ ಸೇರ್ಪಡೆಯೊಂದಿಗೆ 79ಅಂಕ ಪಡೆದುಕೊಳ್ಳುವ ಮೂಲಕ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಶ್ರೇಣಿಯೊಂದಿಗೆ ಉತ್ತೀರ್ಣಳಾಗಿದ್ದಾಳೆ. ಪ್ರಸಕ್ತ ತುಷಾರಾ ಚೆಮ್ನಾಡ್ ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್‍ವನ್ ಕಂಪ್ಯೂಟರ್ ಸಯನ್ಸ್ ವಿದ್ಯಾರ್ಥಿನಿಯಾಗಿ ಕಲಿಕೆ ಮುಂದುವರಿಸಿದ್ದಾಳೆ.





