HEALTH TIPS

'ಕೊಲೆಯಾದ ವ್ಯಕ್ತಿ' ಜೀವಂತ ಪತ್ತೆ: 3 ವರ್ಷಗಳ ನಂತರ ಆರೋಪಿ ಬಿಡುಗಡೆ​

ಬರೇಲಿ : ರೈಲಿನಲ್ಲಿ ಮೊಬೈಲ್ ಕಳ್ಳತನದ ವಿಚಾರದಲ್ಲಿ ನಡೆದ ಜಗಳದಲ್ಲಿ ಕೊಲೆಯಾಗಿದ್ದಾರೆ ಎನ್ನಲಾದ ವ್ಯಕ್ತಿ ಇತ್ತೀಚೆಗೆ ಬಿಹಾರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ. ಪ್ರಕರಣದಲ್ಲಿ ಕೊಲೆ ಆಪಾದನೆ ಹೊತ್ತು ಜೈಲು ಶಿಕ್ಷೆಗೆ ಗುರಿಯಾಗಿದ್ದ ಅಯೋಧ್ಯೆಯ ನಿವಾಸಿಯನ್ನು ಮೂರು ವರ್ಷಗಳ ನಂತರ ಬಿಡುಗಡೆ ಮಾಡಲಾಗಿದೆ.

ಶಹಜಹಾನ್‌ಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದ ಕೊಲೆ ಆರೋಪದ ಮೇಲೆ ಅಯೋಧ್ಯೆಯ ಖೇಮಸರೈ ಗ್ರಾಮದ ನರೇಂದ್ರ ದುಬೆ, ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದರು.

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೊವೊಂದು ಹರಿದಾಡಿತ್ತು. ಅದರಲ್ಲಿ ಕೊಲೆಯಾಗಿದ್ದಾನೆ ಎನ್ನಲಾದ ವ್ಯಕ್ತಿ ಬಿಹಾರದ ತನ್ನ ಸಂಬಂಧಿಕರ ಮನೆಯಲ್ಲಿ ಜೀವಂತವಾಗಿರುವುದು ಪತ್ತೆಯಾಗಿತ್ತು.

ವಿಡಿಯೊದ ಬಗ್ಗೆ ತಿಳಿದ ನಂತರ, ಶಹಜಹಾನ್‌ಪುರ ನ್ಯಾಯಾಲಯವು ಆ ವ್ಯಕ್ತಿಯನ್ನು ಹಾಜರುಪಡಿಸುವಂತೆ ಆದೇಶಿಸಿತ್ತು. ಆತನನ್ನು ಹಾಜರುಪಡಿಸಿದ ಬಳಿಕ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಪಂಕಜ್ ಕುಮಾರ್ ಶ್ರೀವಾಸ್ತವ ಅವರು, ಬುಧವಾರ ನರೇಂದ್ರ ದುಬೆ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿ ಜೈಲಿನಿಂದ ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದ್ದಾರೆ.

ಶಹಜಹಾನ್‌ಪುರದ ಸಹಾಯಕ ಜಿಲ್ಲಾ ಸರ್ಕಾರಿ ಕೌನ್ಸೆಲ್ (ಎಡಿಜಿಸಿ) ಶ್ರೀಪಾಲ್ ವರ್ಮಾ, ಸತ್ತಿದ್ದಾರೆಂದು ಭಾವಿಸಲಾದ ವ್ಯಕ್ತಿ ವಾಸ್ತವವಾಗಿ ಜೀವಂತವಾಗಿದ್ದಾನೆ ಎಂದು ದೃಢಪಡಿಸಿದ್ದಾರೆ.

ಆ ಸಮಯದಲ್ಲಿ ಶವವನ್ನು ಅವರ(ಕೊಲೆಯಾದ ವ್ಯಕ್ತಿ) ತಂದೆ ಮತ್ತು ಸಂಬಂಧಿಕರು ಗುರುತಿಸಿದ್ದರು. ಹಾಗಾಗಿ ಪ್ರಾಸಿಕ್ಯೂಷನ್ ಅನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುವುದಿಲ್ಲ. ನಮ್ಮ ಕೆಲಸ ಶಿಕ್ಷೆಯನ್ನು ವಿಧಿಸುವುದಲ್ಲ. ಬದಲಿಗೆ ನ್ಯಾಯಾಲಯದ ಮುಂದೆ ಸತ್ಯವನ್ನು ಮಂಡಿಸುವುದು ಎಂದು ವರ್ಮಾ ಹೇಳಿದ್ದಾರೆ.

ನ್ಯಾಯಾಧೀಶರು ಸಹ ಪ್ರಾಸಿಕ್ಯೂಷನ್‌ನ ವಾದವನ್ನು ಒಪ್ಪಿಕೊಂಡಿದ್ದಾರೆ. ಕುಟುಂಬಸ್ಥರು ಮೃತ‌ದೇಹದ ಗುರುತನ್ನು ದೃಢಪಡಿಸಿರುವುದರಿಂದ, ತನಿಖಾ ಅಧಿಕಾರಿಯನ್ನು ದೂಷಿಸಲಾಗುವುದಿಲ್ಲ ಎಂದೂ ಹೇಳಿದ್ದಾರೆ.

ಏನಿದು ಪ್ರಕರಣ?

2022ರ ಡಿಸೆಂಬರ್ 16ರಂದು ನಡೆದ ಘಟನೆ ಇದಾಗಿದೆ. ಪ್ರಾಸಿಕ್ಯೂಷನ್ ಪ್ರಕಾರ, ಆ ರಾತ್ರಿ ಬರೇಲಿಯಲ್ಲಿ ನಿಯೋಜನೆಗೊಂಡಿದ್ದ ಜಿಆರ್‌ಪಿ ಕಾನ್‌ಸ್ಟೆಬಲ್ ಸತ್ಯವೀರ್ ಸಿಂಗ್ ಅವರಿಗೆ ದೆಹಲಿ-ಅಯೋಧ್ಯೆ ಎಕ್ಸ್‌ಪ್ರೆಸ್‌ನ ಡಿ2 ಜನರಲ್ ಕೋಚ್‌ನಲ್ಲಿ ಗಲಾಟೆ ನಡೆದ ಬಗ್ಗೆ ಮಾಹಿತಿ ಬಂದಿತ್ತು.

ಶಹಜಹಾನ್‌ಪುರ ಜಿಲ್ಲೆಯ ತಿಲ್ಹಾರ್ ನಿಲ್ದಾಣದ ಬಳಿ ಒಬ್ಬ ವ್ಯಕ್ತಿ ಚಲಿಸುವ ರೈಲಿನಿಂದ ಮತ್ತೊಬ್ಬ ವ್ಯಕ್ತಿಯನ್ನು ತಳ್ಳಿದ್ದಾನೆ ಎಂದು ಆರೋಪಿಸಲಾಗಿತ್ತು.

ಅಯೋಧ್ಯೆ ನಿವಾಸಿ ಅಲೋಕ್ ಎಂಬುವವರು ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ವಿಡಿಯೊವನ್ನು ಸಹ ಕಳುಹಿಸಿದ್ದರು.

ಬೆಳಗಿನ ಜಾವ 1 ಗಂಟೆ ಸುಮಾರಿಗೆ ರೈಲು ಬರೇಲಿ ಜಂಕ್ಷನ್‌ಗೆ ತಲುಪಿದಾಗ, ಆರೋಪಿ ನರೇಂದ್ರ ದುಬೆ ಅವರನ್ನು ಬಂಧಿಸಲಾಗಿತ್ತು. ಬಳಿಕ ತಿಲ್ಹಾರ್ ಪೊಲೀಸರು ರೈಲ್ವೆ ಹಳಿಗಳ ಬಳಿ ಶವ ಶವವನ್ನು ವಶಪಡಿಸಿಕೊಂಡಿದ್ದರು.

ಬಾರಾಬಂಕಿಯ ಸಹ ಪ್ರಯಾಣಿಕರಾದ ಅಜ್ನಿ ಮತ್ತು ದಿಲ್ದಾರ್(ಪ್ರತ್ಯಕ್ಷದರ್ಶಿಗಳು) ಅವರ ಹೇಳಿಕೆಗಳ ಆಧಾರದ ಮೇಲೆ, ಕೊಲೆ ಪ್ರಕರಣವನ್ನು ದಾಖಲಿಸಿ, ದುಬೆಯನ್ನು ಜೈಲಿಗಟ್ಟಲಾಗಿತ್ತು.

ಮೃತ ವ್ಯಕ್ತಿಯನ್ನು ಬಿಹಾರದ ನಿವಾಸಿ ಎತಾಬ್ ಎಂದು ಅವರ ಕುಟುಂಬಸ್ಥರು ಗುರುತಿಸಿದ್ದರು. ಈ ಸಂಬಂಧ ಆರೋಪಪಟ್ಟಿಯನ್ನು ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿತ್ತು.

ವಿಚಾರಣೆಯ ಸಮಯದಲ್ಲಿ, ದುಬೆ ಪರ ವಕೀಲರು ಎತಾಬ್‌ ಜೀವಂತವಾಗಿದ್ದಾನೆ ಎಂಬುದಕ್ಕೆ ಪುರಾವೆ ಇದೆ ಎಂದು ಸಾಕ್ಷ್ಯಗಳನ್ನು ಸಲ್ಲಿಸಿದ್ದರು. ನ್ಯಾಯಾಲಯವು ಸಾಕ್ಷ್ಯವನ್ನು ಪರಿಗಣಿಸಿ ದುಬೆ ನಿರಪರಾಧಿ ಎಂದು ತೀರ್ಪು ನೀಡಿ, ಬಿಡುಗಡೆ ಮಾಡಲು ಆದೇಶಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries