HEALTH TIPS

5 ವರ್ಷದಲ್ಲಿ ಹೆಚ್ಚುವರಿಯಾಗಿ 50 ವಿಮಾನ ನಿಲ್ದಾಣಗಳ ಅಭಿವೃದ್ಧಿ: ವಿಮಾನಯಾನ ಸಚಿವ

ನವದೆಹಲಿ: 'ಮುಂದಿನ 5 ವರ್ಷದಲ್ಲಿ ದೇಶದಲ್ಲಿ ಹೆಚ್ಚುವರಿಯಾಗಿ 50 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುವುದು' ಎಂದು ಕೇಂದ್ರ ವಿಮಾನಯಾನ ಸಚಿವ ಕೆ. ರಾಮ್‌ಮೋಹನ್‌ ನಾಯ್ಡು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ವಾಯು ಸಾರಿಗೆ ಒಕ್ಕೂಟ (ಐಎಟಿಎ) ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಪ್ರಾದೇಶಿಕ ವಾಯು ಸಂಪರ್ಕ ಯೋಜನೆ (ಉಡಾನ್‌) ಅಡಿಯಲ್ಲಿ 619 ಮಾರ್ಗಗಳಲ್ಲಿ ವಾಯುಯಾನ ಸಂಪರ್ಕದ ವ್ಯವಸ್ಥೆ ಕಲ್ಪಿಸಲಾಗಿದೆ' ಎಂದು ಹೇಳಿದ್ದಾರೆ.

ವಿಶ್ವದಲ್ಲಿಯೇ, ಭಾರತದ ವಿಮಾನಯಾನ ಕ್ಷೇತ್ರವು ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿದೆ. ದೇಶದಲ್ಲಿ ಪ್ರಸಕ್ತ 162 ವಿಮಾನ ನಿಲ್ದಾಣಗಳಿದ್ದು, 2014ರಲ್ಲಿ 74 ವಿಮಾನ ನಿಲ್ದಾಣಗಳಿದ್ದವು. ಕಳೆದ 11 ವರ್ಷದಲ್ಲಿ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿವೆ' ಎಂದು ತಿಳಿಸಿದ್ದಾರೆ.

'2031ರ ವೇಳೆಗೆ 4 ಬಿಲಿಯನ್‌ ಡಾಲರ್‌ (₹34 ಸಾವಿರ ಕೋಟಿ) ಮೌಲ್ಯದ ಜಾಗತಿಕ ಎಂಆರ್‌ಒ (ನಿರ್ವಹಣೆ, ರಿಪೇರಿ ಹಾಗೂ ಕೂಲಂಕುಷ ಪರೀಕ್ಷಾ ಕೇಂದ್ರ) ಹಬ್‌ ನಿರ್ಮಾಣಕ್ಕೆ ಪ್ರಯತ್ನಗಳು ಸಾಗಿವೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿಮಾನ ಇಂಧನ ಉತ್ಪಾದನೆಯಲ್ಲಿ ಸುಸ್ಥಿರ ಬೆಳವಣಿಗೆ ಸಾಧಿಸಲು ಭಾರತದ ಜೊತೆಗೆ ಸಹಭಾಗಿತ್ವ ಹೊಂದಲು ಮುಂದೆ ಬರಬೇಕು' ಎಂದು ಜಾಗತಿಕ ಸಂಸ್ಥೆಗಳಿಗೆ ಕರೆ ನೀಡಿದ್ದಾರೆ.

ನವದೆಹಲಿಯಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ವಾಯುಸಾರಿಗೆ ಒಕ್ಕೂಟ 81ನೇ ವಾರ್ಷಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಕೇಂದ್ರ ವಿಮಾನಯಾನ ಸಚಿವ ಕೆ.ರಾಮ್‌ಮೋಹನ್‌ ನಾಯ್ಡು ರಾಜ್ಯ ಸಚಿವ ಮುರಳೀಧರ್‌ ಮೊಹೊಲ್‌ ಭಾಗವಹಿಸಿದ್ದರು-

ನರೇಂದ್ರ ಮೋದಿ, ಪ್ರಧಾನಿಜಾಗತಿಕ ವಿಮಾನಯಾನ ಕ್ಷೇತ್ರದಲ್ಲಿ ಭಾರತದ ಪಾತ್ರ ಮುಖ್ಯವಾಗಿದ್ದು, ವಿಸ್ತಾರವಾದ ಮಾರುಕಟ್ಟೆಯಿಂದ ಮಾತ್ರ ಅಲ್ಲ; ನೀತಿ ನಾಯಕತ್ವದ ಸಂಕೇತ, ಸಂಶೋಧನೆ ಹಾಗೂ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯಿಂದಾಗಿದೆ

'ಬೆಂಗಳೂರು ದೆಹಲಿ ಮುಂಬೈ ನಡುವೆ ಹೆಚ್ಚು ವಿಮಾನ ಸಂಚಾರ'

ನವದೆಹಲಿ: ' 2024ರಲ್ಲಿ ಬೆಂಗಳೂರು ನವದೆಹಲಿ ಹಾಗೂ ಮುಂಬೈ ಮಾರ್ಗದ ನಡುವೆ ದೇಶದಲ್ಲಿಯೇ ಹೆಚ್ಚು ವಿಮಾನಗಳ ಸಂಚಾರ ನಡೆಸುವ ಮೂಲಕ ದೇಶದಲ್ಲಿ ಅತೀ ಹೆಚ್ಚು ದಟ್ಟಣೆಯ ಮಾರ್ಗವಾಗಿ ಗುರುತಿಸಿಕೊಂಡಿದೆ.

ದೇಶದಲ್ಲಿ ಈ ಮೂರು ಮಾರ್ಗದಲ್ಲಿಯೇ ಒಟ್ಟು ವಿಮಾನಗಳ ಹಾರಾಟ ಶೇಕಡಾ 4.7ರಷ್ಟಿದೆ' ಅಂತರರಾಷ್ಟ್ರೀಯ ವಾಯುಸಾರಿಗೆ ಒಕ್ಕೂಟ (ಐಎಟಿಎ) ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಮುಂಬೈ- ದೆಹಲಿ ನಡುವೆ 2024ರಲ್ಲಿ 34 ಸಾವಿರ ವಿಮಾನಗಳು ಹಾರಾಟ ನಡೆಸುವ ಮೂಲಕ ಒಟ್ಟು ಹಾರಾಟದ ಪೈಕಿ ಶೇ 3.4ರಷ್ಟಿದ್ದು ಮೊದಲ ಸ್ಥಾನದಲ್ಲಿದೆ. ಎರಡು ದಿಕ್ಕಿನಲ್ಲಿ ನಿತ್ಯವೂ ಸರಾಸರಿ 100 ವಿಮಾನಗಳು ಹಾರಾಟ ನಡೆಸಿವೆ.

ಬೆಂಗಳೂರು-ದೆಹಲಿ ಮಾರ್ಗದಲ್ಲಿ ಕಳೆದ ವರ್ಷ 27 ಸಾವಿರ ವಿಮಾನಗಳು ಹಾರಾಟ ನಡೆಸಿವೆ. (ಶೇ 2.4) ಬೆಂಗಳೂರು-ಮುಂಬೈ ಮಾರ್ಗದಲ್ಲಿ 25 ಸಾವಿರ ವಿಮಾನಗಳು ಹಾರಾಟ ನಡೆಸಿದೆ (ಶೇ 2.2) ಎಂದು 'ಭಾರತದಲ್ಲಿ ವಾಯುಯಾನ ಕ್ಷೇತ್ರ- ಸುಸ್ಥಿರ- ಬೆಳವಣಿಗೆ' ವರದಿಯು ತಿಳಿಸಿದೆ. ದೆಹಲಿ- ಹೈದರಾಬಾದ್‌ (ಶೇ 1.7) ಪುಣೆ-ದೆಹಲಿ (ಶೇ 1.5) ದೆಹಲಿ-ಕೋಲ್ಕತ್ತ (ಶೇ 1.4) ಅಹಮದಾಬಾದ್‌-ದೆಹಲಿ (1.3) ದೆಹಲಿ-ಶ್ರೀನಗರ (ಶೇ 1.3) ಹೈದರಾಬಾದ್‌- ಮುಂಬೈ (ಶೇ 1.3)ರಷ್ಟಿದ್ದು ಅತೀ ಹೆಚ್ಚು ಸಂಚಾರದಟ್ಟಣೆಯ ಮೊದಲ ಹತ್ತರದಲ್ಲಿ ಸ್ಥಾನ ಪಡೆದಿವೆ. 'ಕೋವಿಡ್‌ ಬಳಿಕ ದೇಶಿಯ ವಿಮಾನಯಾನ ಕ್ಷೇತ್ರದಲ್ಲಿ ಆರಂಭಿಕವಾಗಿ ಕ್ಷಿಪ್ರಗತಿಯಲ್ಲಿ ಚೇತರಿಕೆ ದಾಖಲಿಸಿತು. ಜಾಗತಿಕ ಗಡಿ ತೆರೆದ ಮೇಲೆ ಅಂತರರಾಷ್ಟ್ರೀಯ ಮಾರುಕಟ್ಟೆಯು ನಂತರ ಮುಂದೆ ಸಾಗಿದೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

*17.4 ಕೋಟಿ ಪ್ರಯಾಣಿಕರು 2024ರಲ್ಲಿ ದೇಶಿಯ ಮಾರ್ಗದಲ್ಲಿ ಪ್ರಯಾಣಿಸಿದವರ ಸಂಖ್ಯೆ

*ಶೇಕಡ 8 ದೇಶಿಯ ವಿಮಾನಮಾರ್ಗದಲ್ಲಿ ಕಂಡುಬಂದ ಬೆಳವಣಿಗೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries