ಕಾಸರಗೋಡು: ಮನಶುದ್ದಿ ಮತ್ತು ಆತ್ಮಶುದ್ಧಿಗಾಗಿ ದೇವರು ಸಂಗೀತವನ್ನು ಸೃಷ್ಟಿ ಮಾಡಿದ್ದು, ಒಳ್ಳೆಯ ಸಂಗೀತ ಹಾಡುಗಳನ್ನು ಕೇಳುವುದರಿಂದ ಸಂಸ್ಕಾರ ಜತೆಗೆ ಮನ ಶಾಂತಿ ಸಿಗಲು ಸಾಧ್ಯ ಎಂದು ಖ್ಯಾತ ಛಾಯಾಚಿತ್ರಗ್ರಾಹಕ, ವಿಡಿಯೋಗ್ರಾಫರ್ ಗಣೇಶ್ ಶೆಣೈ ಕುಂಬಳೆ ಹೇಳಿದರು.
ಅವರು ಕಾಸರಗೋಡಿನ ಸಾಂಸ್ಕøತಿಕ ಸಾಹಿತ್ಯಿಕ ಸಂಸ್ಥೆ ರಂಗಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿಯ ನೇತೃತ್ವದಲ್ಲಿ ಕರಂದಕ್ಕಾಡು ಪದ್ಮಗಿರಿ ಕಲಾಕಟೀರದಲ್ಲಿ ನಡೆದ 'ಸ್ವರ ಚಿನ್ನಾರಿ ಅಂತಧ್ರ್ವನಿ-5' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವ ವಿಖ್ಯಾತ ಗಾಯಕ ಪದ್ಮಭೂಷಣ ಡಾ. ಎಸ್. ಪಿ. ಬಾಲಸುಬ್ರಮಣ್ಯಂ ಅವರ ಸಂಸ್ಮರಣೆ ಜತೆಗೆ ಅವರ ಹಾಡುಗಳನ್ನು ಹಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂತಹ ಶ್ರೇಷ್ಠ ಗಾಯಕರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು. ಸಮಾಜ ಸೇವಕ, ಹಿರಿಯ ನೇತಾರ ವಿ. ರವೀಂದ್ರನ್ ಕುಂಬಳೆ, ಮಂಗಳೂರಿನ ಖ್ಯಾತ ಛಾಯಾಗ್ರಾಹಕ ಚಂದ್ರಕಾಂತ ವೋರಾ (ಟಿಕ್ಕು), ನರೇಂದ್ರ ಕಾಮತ್, ನಂದಕಿಶೋರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಂಗ ಚಿನ್ನಾರಿಯ ನಿರ್ದೇಶಕ ಕೆ. ಸತೀಶ್ ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಗಾಯಕ ಬಿ. ಪಿ. ಗೋಪಾಲಕೃಷ್ಣ ಪ್ರಾರ್ಥನೆ ಹಾಡಿದರು. ಸ್ವರ ಚಿನ್ನಾರಿಯ ಸಂಚಾಲಕ ಕಾಸರಗೋಡು ಚಿನ್ನಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಖ್ಯಾತ ಚಲನಚಿತ್ರ ನಟ, ಸಂಕಲನಕಾರ, ಈ ಟಿವಿಯಲ್ಲಿ 'ಎದೆತಂಬಿ ಹಾಡುವೆನು'ಕಾರ್ಯಕ್ರಮದ ನಿರ್ಮಾಪಕ ಕೆ. ಎಸ್. ಶ್ರೀಧರ್ ಸಮಾರೋಪ ಭಾಷಣ ಮಾಡಿ, ಸಂಗೀತ ಮತ್ತು ಯೋಗ ಒಂದು ಆಧ್ಯಾತ್ಮಿಕ ಶಿಸ್ತು. ಇದು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವ ಒಂದು ಸೂಕ್ಷ್ಮ ವಿಜ್ಞಾನವಾಗಿದೆ. ಎಸ್. ಪಿ. ಬಿ. ಅವರ ಧ್ವನಿಯಲ್ಲಿ ಒಂದು ಆಧ್ಯಾತ್ಮಿಕ ಶಕ್ತಿ ಇದೆ. ಅವರ ಶಿಸ್ತು, ಪರಿಶ್ರಮ ಮಕ್ಕಳಿಗೆ ಅವರು ಕೊಡುತ್ತಿದ್ದ ಮಾರ್ಗದರ್ಶನ ಅದೊಂದು ಅಪೂರ್ವ ಅನುಭವವಾಗಿದೆ ಎಂದು ತಿಳಿಸಿದರು. ಕನ್ನಡದ ಖ್ಯಾತ ಬರಹಗಾರ, ನಿವೃತ್ತ ಮುಖ್ಯೋಪಾಧ್ಯಾಯ ವೈ. ಸತ್ಯನಾರಾಯಣ, ಸ್ವರ ಚಿನ್ನಾರಿಯ ಬಬಿತ ಆಚಾರ್ಯ, ಉಷಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.





