HEALTH TIPS

Air India Plane Crash ಎಫೆಕ್ಟ್: 24 ಗಂಟೆಗಳಲ್ಲಿ 7 ವಿಮಾನಗಳ ಹಾರಾಟ ರದ್ದುಗೊಳಿಸಿದ ಏರ್ ಇಂಡಿಯಾ!

ನವದೆಹಲಿ: ಅಹಮದಾಬಾದ್‌ನಲ್ಲಿ ಬೋಯಿಂಗ್ AI 171 ಡ್ರೀಮ್‌ಲೈನರ್ ವಿಮಾನದ ಭೀಕರ ಅಪಘಾತವು ಗಂಭೀರ ಸುರಕ್ಷತೆ ಮತ್ತು ಕಾರ್ಯಾಚರಣೆಯ ಕಳವಳಗಳನ್ನು ಹುಟ್ಟುಹಾಕಿತ್ತು. ಹೀಗಾಗಿ ಏರ್ ಇಂಡಿಯಾ ತಪಾಸಣೆಯನ್ನು ತೀವ್ರಗೊಳಸಿದ್ದು ಆ ನಂತರ ಇಂದು ಹಲವಾರು ಏರ್ ಇಂಡಿಯಾ ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಯಿತು.

ದೆಹಲಿ-ದುಬೈ (AI 915), ದೆಹಲಿ-ವಿಯೆನ್ನಾ (AI 153), ದೆಹಲಿ-ಪ್ಯಾರಿಸ್ (AI 143), ಅಹಮದಾಬಾದ್-ಲಂಡನ್ (AI 159), ಬೆಂಗಳೂರು-ಲಂಡನ್ (AI 133), ಮತ್ತು ಲಂಡನ್-ಅಮೃತಸರ (AI 170) ಸೇವೆಗಳು ಬಾಧಿತವಾಗಿವೆ. ಈ ಮಾರ್ಗಗಳಲ್ಲಿ ಹೆಚ್ಚಿನವು ಬೋಯಿಂಗ್ 787-8 ಡ್ರೀಮ್‌ಲೈನರ್ ಅನ್ನು ಬಳಸುತ್ತಿವೆ. ಜೂನ್ 12ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ 241 ಜನರನ್ನು ಬಲಿ ತೆಗೆದುಕೊಂಡ ದುರಂತದಲ್ಲಿ ಇದೇ ಬೋಯಿಂಗ್ ವಿಮಾನ ಪತನವಾಗಿತ್ತು.

ಏರ್ ಇಂಡಿಯಾ ಕಾರ್ಯಾಚರಣೆಯ ನಿರ್ಬಂಧಗಳು ಮತ್ತು ಹೆಚ್ಚುವರಿ ಸುರಕ್ಷತಾ ಪರಿಶೀಲನೆಗಳು ವಿಮಾನ ಹಾರಾಟದ ಮೇಲೆ ಪರಿಣಾಮ ಬೀರುತ್ತಿದೆ. ನಾವು ಅನಾನುಕೂಲತೆಗೆ ವಿಷಾದಿಸುತ್ತೇವೆ. ಹೋಟೆಲ್ ವಸತಿ, ಪೂರ್ಣ ಮರುಪಾವತಿ ಅಥವಾ ಅಗತ್ಯವಿರುವಲ್ಲಿ ಉಚಿತ ಮರುಹೊಂದಿಕೆ ಸೇರಿದಂತೆ ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಡ್ರೀಮ್‌ಲೈನರ್ ವಿಮಾನದ ಮಾರ್ಗ ಬದಲಾವಣೆ; ವಿಮಾನದ ಮಧ್ಯೆಯೇ ಟರ್ನ್‌ಬ್ಯಾಕ್

ಹಾಂಗ್ ಕಾಂಗ್‌ನಿಂದ ದೆಹಲಿಗೆ ಬರುತ್ತಿದ್ದ AI 315 ವಿಮಾನವು ಹಾರಾಟದ ಮಧ್ಯದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನಲೆಯಲ್ಲಿ ಹಿಂತಿರುಗಬೇಕಾಯಿತು. ಮತ್ತೊಂದು ಘಟನೆಯಲ್ಲಿ ಪಾಕಿಸ್ತಾನದ ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಕೋಲ್ಕತ್ತಾ ಮೂಲಕ ಮಾರ್ಗ ಬದಲಾಯಿಸಲಾಗಿದ್ದ ಸ್ಯಾನ್ ಫ್ರಾನ್ಸಿಸ್ಕೋ-ಮುಂಬೈ ವಿಮಾನ (AI 180) ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಗದಿತ ನಿಲುಗಡೆಯ ಸಮಯದಲ್ಲಿ ತಾಂತ್ರಿಕ ದೋಷದ ಶಂಕೆ ಹಿನ್ನೆಲೆ ಲ್ಯಾಂಡಿಂಗ್ ಮಾಡಬೇಕಾಯಿತು. 211 ಪ್ರಯಾಣಿಕರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 228 ಜನರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಕೆಲವು ಪ್ರಯಾಣಿಕರನ್ನು ಸ್ಥಳೀಯ ಹೋಟೆಲ್‌ಗಳಲ್ಲಿ ಇರಿಸಲಾಗಿದೆ. ಆದರೂ ವಿಮಾನ ನಿಲ್ದಾಣದಲ್ಲಿ ಗೊಂದಲದ ದೃಶ್ಯಗಳು ವರದಿಯಾಗಿವೆ.

ಏರ್ ಇಂಡಿಯಾ ದೆಹಲಿ-ಪ್ಯಾರಿಸ್ ವಿಮಾನ ರದ್ದು

ವಿಮಾನ ಹಾರಾಟ ಪೂರ್ವ ತಪಾಸಣೆಯ ಸಮಯದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಕಂಡುಬಂದ ನಂತರ, ಏರ್ ಇಂಡಿಯಾ ಮಂಗಳವಾರ ತನ್ನ ದೆಹಲಿ-ಪ್ಯಾರಿಸ್ AI 142 ವಿಮಾನವನ್ನು ರದ್ದುಗೊಳಿಸಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಅಲ್ಲದೆ "ಸಮಸ್ಯೆಯನ್ನು" ಪರಿಹರಿಸಲಾಗುತ್ತಿದೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ. ಜೂನ್ 17ರಂದು ದೆಹಲಿಯಿಂದ ಪ್ಯಾರಿಸ್ ಗೆ (A143) ಹಾರಾಟ ನಡೆಸಬೇಕಿದ್ದ ವಿಮಾನವನ್ನು ರದ್ದುಗೊಳಿಸಲಾಗಿದೆ. ಕಡ್ಡಾಯ ಪೂರ್ವ ವಿಮಾನ ತಪಾಸಣೆಯಲ್ಲಿ ಪ್ರಸ್ತುತ ಪರಿಹರಿಸಲಾಗುತ್ತಿರುವ ಸಮಸ್ಯೆಯನ್ನು ಗುರುತಿಸಲಾಗಿದೆ.

ಅಹಮದಾಬಾದ್-ಗ್ಯಾಟ್ವಿಕ್ ವಿಮಾನ ಹಾರಾಟ ರದ್ದು

ವಾಯುಪ್ರದೇಶ ನಿರ್ಬಂಧಗಳು ಮತ್ತು ಮುನ್ನೆಚ್ಚರಿಕೆ ಪರಿಶೀಲನೆಗಳಿಂದಾಗಿ ವಿಮಾನ ಲಭ್ಯವಿಲ್ಲದ ಕಾರಣ" ಅಹಮದಾಬಾದ್ ನಿಂದ ಲಂಡನ್ ನ ಗ್ಯಾಟ್ವಿಕ್ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿದೆ. ತಾಂತ್ರಿಕ ದೋಷವು ರದ್ದತಿಗೆ ಕಾರಣ ಎಂಬ ಮಾಧ್ಯಮ ವರದಿಗಳನ್ನು ಅದು ನಿರಾಕರಿಸಿದೆ.

ಇಂಡಿಗೋ ವಿಮಾನವು ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ

ಮಂಗಳವಾರ ನಡೆದ ಪ್ರತ್ಯೇಕ ವಿಮಾನ ಘಟನೆಯಲ್ಲಿ, ಮಸ್ಕತ್ ನಿಂದ ಕೊಚ್ಚಿ ಮೂಲಕ ದೆಹಲಿಗೆ ಹೋಗುವ ಇಂಡಿಗೋ ವಿಮಾನ 6E 2706 ಬಾಂಬ್ ಬೆದರಿಕೆಯ ನಂತರ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಅನುಮಾನಾಸ್ಪದ ಅಂಶ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries