ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ ಏರ್ ಇಂಡಿಯಾ ವಿಮಾನ ಪತನವಾಗಿದ್ದು, ಒಬ್ಬ ಪ್ರಯಾಣಿಕ ಹೊರತುಪಡಿಸಿ ಉಳಿದ ಎಲ್ಲಾ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಮೃತಪಟ್ಟಿದ್ದಾರೆ.
ಇಂದು ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಏರ್ ಇಂಡಿಯಾ ವಿಮಾನ ಕೆಲವೇ ನಿಮಿಷಗಳಲ್ಲಿ ಮಣಿನಗರ ಪ್ರದೇಶದಲ್ಲಿರುವ ಬಿಜೆ ವೈದ್ಯಕೀಯ ಕಾಲೇಜಿನ ವೈದ್ಯರ ವಸತಿ ಸಮುಚ್ಚಯಕ್ಕೆ ಅಪ್ಪಳಿಸಿದೆ. ಈ ಭೀಕರ ದುರಂತದಲ್ಲಿ ಮೂವರು ವೈದ್ಯರು ಹಾಗೂ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ವಿಮಾನ ಅಪ್ಪಳಿಸಿದ ಪರಿಣಾಮ ಆವರಣದಲ್ಲಿನ ಹಲವು ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ವಿಮಾನವು ತುಂಬಾ ಕೆಳಮಟ್ಟದಲ್ಲಿ ಹಾರುತ್ತಿತ್ತು ಮತ್ತು ಅದು ಸರ್ಕಾರಿ ಕಾಲೇಜಿನ ವೈದ್ಯರ ವಸತಿ ನಿಲಯಕ್ಕೆ ಅಪ್ಪಳಿಸಿತು ಎಂದು ಪ್ರತ್ಯಕ್ಷದರ್ಶಿ ಹರೇಶ್ ಶಾ ಪಿಟಿಐಗೆ ತಿಳಿಸಿದ್ದಾರೆ.
"ವೈದ್ಯರ ವಸತಿ ಸಮುಚ್ಚಯದಲ್ಲಿ ಹಲವಾರು ಐದು ಅಂತಸ್ತಿನ ಕಟ್ಟಡಗಳಿವೆ. ವಿಮಾನ ಪತನದಿಂದ ಈ ಕಟ್ಟಡಗಳು ಬೆಂಕಿಗೆ ಆಹುತಿಯಾಗಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿದ್ದ ಅನೇಕ ಜನ ಗಾಯಗೊಂಡಿದ್ದಾರೆ" ಎಂದು ಅವರು ಹೇಳಿದ್ದಾರೆ.
247 ಮಂದಿ ಸಾವು
ಈ ದುರಂತದಲ್ಲಿ ಒಟ್ಟು 247 ಮಂದಿ ಸಾವಿಗೀಡಾಗಿದ್ದು, ಈ ಪೈಕಿ 230 ವಿಮಾನ ಪ್ರಯಾಣಿಕರು, 10 ಮಂದಿ ವಿಮಾನ ಸಿಬ್ಬಂದಿ, ಇಬ್ಬರು ಪೈಲಟ್(ಮುಖ್ಯ ಪೈಲಟ್ ಸುಮಿತ್ ಸಭರ್ವಾಲ್ ಮತ್ತು ಕೋ ಪೈಲಟ್ ಕ್ಲೈವ್ ಕುಂದರ್) ಗಳು ಸೇರಿದ್ದರು.
ವಿಮಾನದಲ್ಲಿದ್ದ 242 ಜನರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, ಒಬ್ಬರು ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಇದ್ದರು ಎಂದು ತಿಳಿದುಬಂದಿದೆ.




