ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ ಮಧ್ಯಾಹ್ನ ಏರ್ ಇಂಡಿಯಾ ವಿಮಾನ ಪತನವಾಗಿದ್ದು, 241 ಜನರನ್ನು ಬಲಿ ಪಡೆದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಜೆ ಏರ್ ಇಂಡಿಯಾ ವಿಮಾನ ಪತನವಾದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಮತ್ತು ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ಅಮಿತ್ ಶಾ ಅವರಿಗೆ ಸಾಥ್ ನೀಡಿದರು.
230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯೊಂದಿಗೆ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಇಂದು ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ.
ದುರಂತಕ್ಕೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತ ನಮ್ಮನ್ನು ದಿಗ್ಭ್ರಮೆಗೊಳಿಸಿದೆ. ಇದು ಪದಗಳಿಗೆ ಮೀರಿದ ಹೃದಯವಿದ್ರಾವಕ ಘಟನೆ. ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವ ಬಗ್ಗೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.




