ಚಂಡೀಗಢ: ಹತ್ಯೆಗೀಡಾದ ಗಾಯಕ ಹಾಗೂ ರಾಜಕಾರಣಿ ಸಿಧು ಮೂಸೆವಾಲಾ ಕುರಿತ ಸಾಕ್ಷ್ಯ ಚಿತ್ರವನ್ನು ಬಿಬಿಸಿ ವರ್ಲ್ಡ್ ಸರ್ವೀಸ್ ಸಿದ್ಧಪಡಿಸಿಧು, ಯುಟ್ಯೂಬ್‌ನಲ್ಲಿ ಎರಡು ಭಾಗಗಳಾಗಿ ಪ್ರದರ್ಶಿಸಿದೆ.
2022ರ ಮೇ 29ರಂದು ಸಿಧು ಕಾರಿನಲ್ಲಿದ್ದ ಸಂದರ್ಭದಲ್ಲಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.
ಇದೀಗ ಅವರ ಕುರಿತ ಸಾಕ್ಷ್ಯ ಚಿತ್ರ ಸಿದ್ಧಗೊಂಡಿದ್ದು, ಇದನ್ನು ಬಿಡುಗಡೆ ಮಾಡದಂತೆ ತಡೆ ನೀಡಬೇಕೆಂದು ಸಿಧು ತಂದೆ ಬಲ್ಕೌರ್ ಸಿಂಗ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಗಾಯಕ-ರಾಜಕಾರಣಿ ಸಿಧು ಮೂಸ್ ವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಸಿಧು ಮೂಸೆವಾಲಾ ಅವರ ಭದ್ರತೆಯನ್ನು ರಾಜ್ಯ ಸರ್ಕಾರ ಮೊಟಕುಗೊಳಿಸಿದ ಒಂದು ದಿನದ ನಂತರ ಸಿಧುಗೆ ಗುಂಡು ಹಾರಿಸಲಾಯಿತು. ಆತನೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಆತನ ಸೋದರ ಸಂಬಂಧಿ ಮತ್ತು ಸ್ನೇಹಿತ ಕೂಡ ಹಲ್ಲೆಯಿಂದ ಗಾಯಗೊಂಡಿದ್ದರು. ಘಟನೆ ಸಂಬಂಧ ಕೆನಡಾದಲ್ಲಿ ಗೋಲ್ಡಿ ಬ್ರಾರ್‌ನನ್ನು ಬಂಧಿಸಲಾಗಿತ್ತು.
ಸಿಧುದೀಪ್ ಸಿಂಗ್ ಸಿಧು (ಸಿಧು ಮೂಸೆವಾಲಾ) ಅವರ ಜನ್ಮದಿನ ಸಂದರ್ಭದಲ್ಲೇ 'ದಿ ಕಿಲ್ಲಿಂಗ್ ಕಾಲ್' ಎಂಬ ಶೀರ್ಷಿಕೆಯಡಿ ಸಾಕ್ಷ್ಯಚಿತ್ರವನ್ನು ಬಿಬಿಸಿ ಬಿಡುಗಡೆ ಮಾಡಿದೆ. ಇದಕ್ಕೆ ತಡೆ ನೀಡುವಂತೆ ಸಿಧು ತಂದೆ ಬಲ್ಕೌರ್ ಸಿಂಗ್ ಅವರು ಮಾನ್ಸಾ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ಜೂನ್ 12ಕ್ಕೆ ನ್ಯಾಯಾಲಯ ಮುಂದೂಡಿದೆ.
'ಮಗನ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಅದರ ಮೇಲೆ ಈ ಸಾಕ್ಷ್ಯಚಿತ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಜತೆಗೆ ಇದು ಕುಟುಂಬದ ಖಾಸಗಿತನಕ್ಕೂ ಧಕ್ಕೆಯುಂಟು ಮಾಡಲಿದೆ' ಎಂದು ಅರ್ಜಿಯಲ್ಲಿ ಹೇಳಲಾಗಿದೆ.




