ಕೊಚ್ಚಿ: ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿದ ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯ ನಂತರ ದಾಖಲಾಗಿದ್ದ ಎಲ್ಲಾ ಪ್ರಕರಣಗಳ ತನಿಖೆಯನ್ನು ಮುಕ್ತಾಯಗೊಳಿಸಲಾಗಿದೆ.
ಹೇಮಾ ಸಮಿತಿ ವರದಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಒಟ್ಟು 34 ಪ್ರಕರಣಗಳ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ಇಂದು ಹೈಕೋರ್ಟ್‍ಗೆ ತಿಳಿಸಿದೆ.
ಹೇಮಾ ಸಮಿತಿಯ ಮುಂದೆ ನೀಡಿದ ಹೇಳಿಕೆಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲು ಮತ್ತು ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡವನ್ನು ನೇಮಿಸಿತ್ತು. sಸಂತ್ರಸ್ಥೆಯರು ಎಸ್‍ಐಟಿ ಮುಂದೆ ತಮ್ಮ ಹೇಳಿಕೆಗಳನ್ನು ನೀಡಲು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಯಿತು. ಆದರೂ, ಅವರು ವಿಶೇಷ ತಂಡದ ತನಿಖೆಗೆ ಸಹಕರಿಸಲಿಲ್ಲ. ಎಲ್ಲಾ ಪ್ರಕರಣಗಳ ತನಿಖೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಸರ್ಕಾರ ಘೋಷಿಸಿತು.
ನ್ಯಾಯಮೂರ್ತಿಗಳಾದ ಎ.ಕೆ. ಜಯಶಂಕರನ್ ನಂಬಿಯಾರ್ ಮತ್ತು ಸಿ.ಎಸ್. ಸುಧಾ ಅವರನ್ನೊಳಗೊಂಡ ವಿಶೇಷ ಪೀಠವು ವಿಶೇಷ ತನಿಖಾ ತಂಡವು ಯಾರನ್ನೂ ಹೇಳಿಕೆ ನೀಡುವಂತೆ ಒತ್ತಾಯಿಸಬಾರದು ಎಂದು ಸ್ಪಷ್ಟಪಡಿಸಿತ್ತು.
ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಶೋಷಣೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ಎಸ್‍ಐಟಿಯ ನೋಡಲ್ ಸಂಸ್ಥೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿತ್ತು.
ಹೊಸ ಕಾನೂನು ಜಾರಿಗೆ ಬರುವವರೆಗೆ ನ್ಯಾಯಾಲಯದ ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ ಎಂದು ಹೈಕೋರ್ಟ್ ಹೇಳಿದೆ.





