ಕಾಸರಗೋಡು: ಭಾರತದಲ್ಲಿ ಲಕ್ಷಾಂತರ ಮಂದಿ ಆಶಾ ಕಾರ್ಯಕರ್ತೆಯರು ತಮಗೆ ಸಿಗುವ ಅತ್ಯಲ್ಪ ಗೌರವಧನದಿಂದಾಗಿ ಅತ್ಯಂತ ಶೋಚನೀಯ ಜೀವನವನ್ನು ನಡೆಸುವ ಪರಿಸ್ಥಿತಿ ಎದುರಾಗಿರುವುದಾಗಿ ಬಿಎಂಎಸ್ ರಾಜ್ಯ ಉಪಾಧ್ಯಕ್ಷ, ವಕೀಲ ಪಿ. ಮುರಳೀಧರನ್ ತಿಳಿಸಿದ್ದಾರೆ.
ಅವರು ಬಿಎಂಎಸ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೇರಳ ಆಶಾ ಕಾರ್ಯಕರ್ತೆಯರ ಸಂಘ(ಬಿಎಂಎಸ್)ದ ಕಾಸರಗೋಡು ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು ಆರೋಗ್ಯ ಕ್ಷೇತ್ರದ ಯಾವುದೇ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಆಶಾ ಕಾರ್ಯಕರ್ತರಿಗೆ ಅವರ ಕೆಲಸಕ್ಕೆ ತಕ್ಕ ವೇತನ ಸಿಗದಿರುವುದು ವಿಷಾದನೀಯ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕು. ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಗುರುತಿಸಬೇಕು, ಅವರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ನೀಡುವುದರ ಜತೆಗೆ ಸೂಕ್ತ ಪರಿಗಣನೆಯನ್ನು ನೀಡಬೇಕು ಎಂದು ತಿಳಿಸಿದರು.
ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷೆ ಜಯಲಕ್ಷ್ಮಿ ಮಂಜೇಶ್ವರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ ಉಪಸ್ಥಿತರಿದ್ದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಿಯಂತ್ರಿಸಿದರು. ರಾಜ್ಯ ಸಮಿತಿ ಸದಸ್ಯ ಬಿ.ವಿ. ಬಾಲಕೃಷ್ಣನ್ ಸಮಾರೋಪ ಭಾಷಣ ಮಾಡಿದರು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್, ಬಿಎಂಎಸ್ ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ಪಿ. ದಿನೇಶ್ ಬಂಪ್ರಾಣ, ಯಶವಂತಿ ಬೆಜ್ಜೆ, ಕಾಸರಗೋಡು ಪ್ರಾದೇಶಿಕ ಕಾರ್ಯದರ್ಶಿ ಬಾಬುಮೋನ್ ಚೆಂಗಳ ಉಪಸ್ಥಿತರಿದ್ದರು. ಓಮನಾ ಮಾಧವನ್ ಪರವನಡ್ಕ ಸ್ವಾಗತಿಸಿದರು. ಗೀತಾ ಬಾಲಕೃಷ್ಣನ್ ವಂದಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.


