ನವದೆಹಲಿ: ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಚಾರಣಾ ಸಮಿತಿಯು ತಿಳಿಸಿದೆ. ಅಲ್ಲದೇ, ವರ್ಮಾ ಅವರನ್ನು ಸೇವೆಯಿಂದ ತೆಗೆದುಹಾಕುವಂತೆ ವರದಿಯಲ್ಲಿ ಶಿಫಾರಸು ಮಾಡಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡಿದ್ದ ವಿಚಾರಣಾ ಸಮಿತಿಯು 10 ದಿನಗಳ ಕಾಲ ವಿಚಾರಣೆ ನಡೆಸಿತು. 55 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ 64 ಪುಟಗಳ ಈ ವರದಿಯನ್ನು ರಚಿಸಿದೆ.
'ನಗದು ಪತ್ತೆಯಾಗಿದ್ಠ ಕೊಠಡಿಯನ್ನು ವರ್ಮಾ ಹಾಗೂ ಅವರ ಕುಟುಂಬಸ್ಥರು ಗೋಪ್ಯವಾಗಿ ನಿರ್ವಹಿಸುತ್ತಿದ್ದರು ಎಂಬುದು ಸಾಬೀತಾಗಿದೆ. ಅಲ್ಲದೇ, 2025ರ ಮಾರ್ಚ್ 15ರ ಬೆಳಗಿನ ಜಾವ ಆ ಕೊಠಡಿಯಿಂದ ನಗದನ್ನು ಹೊರಗೆ ಸಾಗಿಸಲಾಗಿದೆ ಎಂಬುದೂ ಬಹಿರಂಗಗೊಂಡಿದೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಎಲ್ಲಾ ಪ್ರತ್ಯಕ್ಷ ಹಾಗೂ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಪರಿಗಣಿಸಿ ವರ್ಮಾ ಅವರ ವಿರುದ್ಧದ ಆರೋಪಗಳು ಸಾಬೀತಾಗಿರುವುದನ್ನು ಹಾಗೂ ಈ ಅಪರಾಧಗಳು ಅವರ ವಾಗ್ದಂಡನೆಯನ್ನು ಪ್ರತಿಪಾದಿಸುವಷ್ಟು ಗಂಭೀರವಾದವು ಎಂಬುದನ್ನು ಸಮಿತಿ ಒಪ್ಪುತ್ತದೆ' ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ವರ್ಮಾ ಪುತ್ರಿ ಬಗ್ಗೆಯೂ ಉಲ್ಲೇಖ
ನಿವಾಸದಲ್ಲಿ ನಗದು ಪತ್ತೆಯಾದ ಬಗ್ಗೆ ವರ್ಮಾ ಅವರ ಪ್ರತಿಕ್ರಿಯೆಯನ್ನು ಕೋರಲಾಗಿದ್ದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅವರು ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಅಲ್ಲದೇ, ನಗದನ್ನು ಕೊಠಡಿಯಿಂದ ಹೊರತೆಗೆದವರು ಯಾರು ಎಂಬುದರ ಬಗ್ಗೆ ಸಮಿತಿ ವಿಚಾರಣೆ ನಡೆಸಿದೆ. ಈ ವೇಳೆ ನಿವಾಸದಲ್ಲಿದ್ದ ವರ್ಮಾ ಅವರ ಪುತ್ರಿಯನ್ನೂ ವಿಚಾರಣೆಗೆ ಒಳಪಡಿಸಿದೆ. ಘಟನೆಯಿಂದಾಗಿ ಆಕೆ ಭಯಭೀತಳಾಗಿದ್ದಳು ಎಂಬುದನ್ನು ವರದಿ ಉಲ್ಲೇಖಿಸಿದೆ.
ಏನಿದು ಪ್ರಕರಣ:
2025ರ ಮಾರ್ಚ್ 14ರಂದು ರಾತ್ರಿ 11.35ರ ವೇಳೆಗೆ ವರ್ಮಾ ಅವರ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ನಗದು ಪತ್ತೆಯಾದ ಆರೋಪಗಳು ಕೇಳಿಬಂದಿದ್ದು, ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮಾ.22ರಂದು ಆಗಿನ ಸಿಜೆಐ ಸಂಜೀವ್ ಖನ್ನಾ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದ್ದರು.
ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿ.ಎಸ್. ಸಂಧಾವಾಲಿಯಾ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನೂ ಈ ವಿಚಾರಣಾ ಸಮಿತಿ ಒಳಗೊಂಡಿತ್ತು. ಈ ಸಮಿತಿಯ ವರದಿಯನ್ನು ಆಧರಿಸಿ ಸಂಜೀವ್ ಖನ್ನಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ವರ್ಮಾ ಅವರ ವಾಗ್ದಂಡನೆಗೆ ಶಿಫಾರಸು ಕೂಡ ಮಾಡಿದ್ದರು.
'ನ್ಯಾಯಾಂಗ ವ್ಯವಸ್ಥೆಯಲ್ಲಿನ ಉನ್ನತಾಧಿಕಾರಿಯ ಬಗ್ಗೆ ಸಾಮಾನ್ಯ ಜನರ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಅಂಥ ವ್ಯಕ್ತಿಗಳು ಪ್ರಾಮಾಣಿಕರಾಗಿರಲೇಬೇಕು. ಅದು ಮೂಲಭೂತ ಮಾನದಂಡವೂ ಹೌದು. ನ್ಯಾಯಾಂಗದ ಎಲ್ಲಾ ಹಂತದ ಅಧಿಕಾರಿಗಳೂ ಪ್ರಾಮಾಣಿಕರಾಗಿರಲೇಬೇಕು. ಜನರ ವಿಶ್ವಾಸದ ಆಧಾರದಲ್ಲೇ ನ್ಯಾಯಾಂಗದ ಅಸ್ತಿತ್ವವಿದ್ದು ನ್ಯಾಯಮೂರ್ತಿಗಳ ವರ್ತನೆಗಳನ್ನೇ ಆ ವಿಶ್ವಾಸ ಆಧರಿಸಿರುತ್ತದೆ. ನ್ಯಾಯಾಲಯದ ಒಳಗೆ ಮಾತ್ರವಲ್ಲದೆ ಹೊರಗೂ ಆ ನಡವಳಿಕೆ ಮುಖ್ಯ. ಪ್ರಾಮಾಣಿಕತೆಯಲ್ಲಿ ಕೊರತೆಯಾದರೆ ಅದು ಜನರ ವಿಶ್ವಾಸಕ್ಕೆ ಕುಂದು ಉಂಟುಮಾಡುತ್ತದೆ. ಅಂಥ ಪ್ರಕರಣಗಳನ್ನು ಕಟ್ಟುನಿಟ್ಟಾಗಿಯೇ ನಿರ್ವಹಿಸಲಾಗುವುದು' ಎಂದು ವರ್ಮಾ ಅವರನ್ನು ಸೇವೆಯಿಂದ ವಜಾಗೊಳಿಸಲು ಶಿಫಾರಸು ಮಾಡುವಾಗ ಸಮಿತಿ ಅಭಿಪ್ರಾಯಪಟ್ಟಿದೆ. ಜನರ ವಿಶ್ವಾಸಕ್ಕೆ ಧಕ್ಕೆ ಸಲ್ಲದು1997ರಲ್ಲಿ ಸುಪ್ರೀಂ ಕೋರ್ಟ್ ಅಳವಡಿಸಿಕೊಂಡ 'ನ್ಯಾಯಾಂಗ ಮೌಲ್ಯಗಳನ್ನು' ವರದಿಯಲ್ಲಿ ಉಲ್ಲೇಖಿಸಲಾಗಿದೆ. * ನ್ಯಾಯಮೂರ್ತಿಗಳು ಪ್ರಾಮಾಣಿಕರಾಗಿರಬೇಕು ಪ್ರತಿಯೊಬ್ಬರ ಸದ್ಗುಣವನ್ನು ಪ್ರಾಮಾಣಿಕತೆ ಆಧಾರದಲ್ಲೇ ಅಳೆಯಲಾಗುತ್ತದೆ * ನಾಗರಿಕ ಸೇವಾ ಹುದ್ದೆಯಲ್ಲಿರುವ ವ್ಯಕ್ತಿಯ ಪ್ರಾಮಾಣಿಕತೆಗಿಂತಲೂ ನ್ಯಾಯಮೂರ್ತಿಗಳ ಪ್ರಮಾಣಿಕತೆಯನ್ನು ಪರೀಕ್ಷಿಸುವ ಮಾಪಕ ತೀಕ್ಷ್ಣವಾಗಿರುತ್ತದೆ *ಪ್ರಾಮಾಣಿಕತೆಯು ಪ್ರಧಾನವೂ ಪ್ರಸ್ತುತವೂ ಅಪೇಕ್ಷಿತವೂ ಆಗಿರಲೇಬೇಕು ಸಮಿತಿ ವರದಿ ಹೇಳಿದೆ.




