ನವದೆಹಲಿ: ಇಸ್ರೇಲ್ (Israel) ಮತ್ತು ಇರಾನ್ (Iran) ದೇಶಗಳ ನಡುವೆ ಮತ್ತೆ ದಾಳಿ ಶುರುವಾಗಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರಿಂದ ದೂರವಾಣಿ ಕರೆ ಬಂದಿದೆ.
ನರೇಂದ್ರ ಮೋದಿ (PM Narendra Modi) ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿಯೊಂದಿಗಿನ ತಮ್ಮ ಸಂವಾದವನ್ನು ದೃಢಪಡಿಸಿದ್ದಾರೆ.
'ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಂದ ದೂರವಾಣಿ ಕರೆ ಬಂದಿದೆ. ಅವರು ಇಸ್ರೇಲ್-ಇರಾನ್ ಪರಿಸ್ಥಿತಿಯ ಬಗ್ಗೆ ನನಗೆ ವಿವರಿಸಿದ್ದಾರೆ. ನಾನು ಭಾರತದ ಕಳವಳಗಳನ್ನು ಹಂಚಿಕೊಂಡಿದ್ದೇನೆ. ಆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಪುನಃಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳಿದ್ದೇನೆ' ಎಂದು ಮೋದಿ ಎಕ್ಸ್ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇಸ್ರೇಲ್ ಇರಾನ್ ಮೇಲೆ ದಾಳಿ:
ಇಂದು (ಶುಕ್ರವಾರ) ಇಸ್ರೇಲ್ ಇರಾನ್‌ನ ಪರಮಾಣು ಮೂಲಸೌಕರ್ಯ, ಕ್ಷಿಪಣಿ ವ್ಯವಸ್ಥೆಗಳು ಮತ್ತು ಮಿಲಿಟರಿ ಕಮಾಂಡ್‌ನ ನಿರ್ಣಾಯಕ ಘಟಕಗಳನ್ನು ಗುರಿಯಾಗಿಸಲು 'ಆಪರೇಷನ್ ರೈಸಿಂಗ್ ಲಯನ್' ಅನ್ನು ಪ್ರಾರಂಭಿಸಿತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಕಾರ್ಯಾಚರಣೆಯನ್ನು ಅತ್ಯಂತ ಯಶಸ್ವಿ ಆರಂಭಿಕ ದಾಳಿ ಎಂದು ಬಣ್ಣಿಸಿದ್ದಾರೆ.
ಇಸ್ರೇಲ್ ದಾಳಿ ನಡೆದ ಕೆಲವು ಗಂಟೆಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಪರಮಾಣು ಒಪ್ಪಂದ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಮತ್ತು ಮಿಲಿಟರಿ ಕ್ರಮದ ಸಾಧ್ಯತೆಯ ಬಗ್ಗೆ ಎಚ್ಚರಿಸಿದ್ದಾರೆ. 'ನಾನು ಇರಾನ್‌ಗೆ ಒಪ್ಪಂದ ಮಾಡಿಕೊಳ್ಳಲು ಇರುವ ಅವಕಾಶದ ಬಗ್ಗೆ ಹೇಳಿದ್ದೇನೆ. ಈ ಮೂಲಕ ಇನ್ನಷ್ಟು ಹತ್ಯಾಕಾಂಡವನ್ನು ನಿಲ್ಲಿಸಬಹುದು ಎಂದು ಸೂಚಿಸಿದ್ದೇನೆ' ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಹೇಳಿದ್ದಾರೆ.




