ನವದೆಹಲಿ: ರಾಜ್ಯದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿ ಸಿದ್ಧತೆಗೆ ಸಂಬಂಧಿಸಿದ ಶಿಫಾರಸು ಹಾಗೂ ಸಮೀಕ್ಷೆಗೆ ಸಂಬಂಧಿಸಿದ ಅಧಿಸೂಚನೆಯ ಮಾಹಿತಿ ಹಂಚಿಕೊಳ್ಳುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು (ಎನ್‌ಸಿಬಿಸಿ)ವು ಸೂಚನೆ ನೀಡಿದೆ.
ಒಬಿಸಿ ಪಟ್ಚಿ ವಿಚಾರ ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಹಾಗೂ ಬಿಜೆಪಿ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿದೆ.
'ಈ ಹಿಂದೆ ತಯಾರಿಸಿದ್ದ ಪಟ್ಟಿಯನ್ನು ಕಲ್ಕತ್ತಾ ಹೈಕೋರ್ಟ್ ರದ್ದುಪಡಿಸಿತ್ತು. ಆ ವೇಳೆ ಈ ಪಟ್ಟಿಯನ್ನು ಕೇಳಿದಾಗ ರಾಜ್ಯ ಸರ್ಕಾರ ಹಂಚಿಕೊಂಡಿರಲಿಲ್ಲ' ಎಂದು ಎನ್‌ಸಿಬಿಸಿ ಅಧ್ಯಕ್ಷ ಹಂಸರಾಜ್ ಅಹೀರ್ ತಿಳಿಸಿದ್ದಾರೆ.
'ನಾವು ಮತ್ತೆ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದೇವೆ' ಎಂದು ಅಹೀರ್ ಹೇಳಿದ್ದಾರೆ.
'ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಒಬಿಸಿ ಪಟ್ಟಿಯಲ್ಲಿ ಮುಸಲ್ಮಾನರಿಗೆ ಹೆಚ್ಚಿನ ಒಲವು ತೋರಿದ್ದು, ಹಿಂದೂಗಳಲ್ಲಿನ ಜಾತಿಗಳನ್ನು ಕಡೆಗಣಿಸಲಾಗಿದೆ' ಎಂದು ಬಿಜೆಪಿ ಆರೋಪಿಸಿತ್ತು.
ಮೇ 27ರಂದು ಪಶ್ಚಿಮ ಬಂಗಾಳ ಸರ್ಕಾರ ಪ್ರಕಟಿಸಿದ ಅಧಿಸೂಚನೆ ಹಾಗೂ ಜೂನ್ 3ರಂದು ವಿಸ್ತೃತ ಸಮೀಕ್ಷೆಯಲ್ಲಿ ಹಲವಾರು ಜಾತಿಗಳನ್ನು ಉಪ-ವರ್ಗೀಕರಿಸಲಾಗಿದೆ' ಎಂದು ಎನ್‌ಬಿಸಿಸಿ ಕೂಡ ತಿಳಿಸಿತ್ತು. ಸಮೀಕ್ಷೆಯ ವಿಸ್ತೃತ ವರದಿ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮೂರು ದಿನಗಳ ಒಳಗಾಗಿ ಸಲ್ಲಿಸುವಂತೆ ರಾಷ್ಟ್ರೀಯ ಆಯೋಗವು ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿತ್ತು.
ಆರೋಪ ನಿರಾಕರಣೆ: 'ಒಬಿಸಿ ಪಟ್ಟಿ ಸಿದ್ಧಪಡಿಸುವಲ್ಲಿ ಯಾವುದೇ ಧರ್ಮವೂ ಪಾತ್ರ ವಹಿಸಿಲ್ಲ' ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ ಪಶ್ಚಿಮ ಬಂಗಾಳದ ಸಹ ಉಸ್ತುವಾರಿ ಅಮಿತ್ ಮಾಳವೀಯ,'2010ರ ಒಬಿಸಿ ಪಟ್ಟಿ ಪ್ರಕಾರ, 66ರಲ್ಲಿ 11 ಮುಸಲ್ಮಾನ ಜಾತಿಗಳಿದ್ದವು. ಈಗಿನ ಹೊಸ ಪಟ್ಟಿಯಲ್ಲಿ 51ರಲ್ಲಿ 46 ಮುಸಲ್ಮಾನ ಜಾತಿಗಳಿವೆ. ಹಾಗಿದ್ದರೆ, ಇದು ಧರ್ಮ ಆಧಾರಿತ ತುಷ್ಟೀಕರಣ ಅಲ್ಲವೇ. ಮತ್ತೇನು' ಎಂದು ಪ್ರಶ್ನಿಸಿದ್ದಾರೆ.




