HEALTH TIPS

ಸದ್ದಾಂಗೆ ಆದ ಗತಿಯೇ ಖಮೇನಿಗೂ ಆಗಬಹುದು: ಇರಾನ್‌ಗೆ ಎಚ್ಚರಿಕೆ ನೀಡಿದ ಇಸ್ರೇಲ್

ಜೆರುಸಲೇಂ/ಟೆಲ್‌ ಅವೀವ್/ದುಬೈ: ಇರಾಕ್‌ ಸರ್ವಾಧಿಕಾರಿಯಾಗಿದ್ದ ಸದ್ದಾಂ ಹುಸೇನ್‌ಗೆ ಆದ ಗತಿಯೇ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೂ ಆಗಬಹುದು ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕ್ಯಾಟ್ಜ್‌ ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್ ಸೇನೆ ಮತ್ತು ಭದ್ರತಾ ಸೇವೆಗಳ ಕಮಾಂಡರ್‌ಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಕ್ಯಾಟ್ಜ್, 'ಇಸ್ರೇಲ್ ವಿರುದ್ಧವಾಗಿ ಇರಾನ್‌ ರೀತಿ ನಡೆದುಕೊಂಡ ನೆರೆಯ ದೇಶದ ಸರ್ವಾಧಿಕಾರಿಯ ಪರಿಸ್ಥಿತಿ ಏನಾಯಿತು ಎಂಬುವುದನ್ನು ನೆನಪಿಸಿಕೊಳ್ಳಲಿ' ಎಂದು ಹೇಳಿರುವುದಾಗಿ ಅವರ ಕಚೇರಿ ತಿಳಿಸಿದೆ.

ಯುದ್ಧ ಅಪರಾಧಗಳನ್ನು ಎಸಗುತ್ತಿರುವ ಮತ್ತು ಇಸ್ರೇಲ್ ನಾಗರಿಕರ ವಿರುದ್ಧ ಕ್ಷಿಪಣಿ ದಾಳಿಯನ್ನು ಮುಂದುವರಿಸುತ್ತಿರುವ ಇರಾನ್‌ ಸರ್ವೋಚ್ಛ ನಾಯಕರಿಗೆ ಮುಂದಿನ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

2003ರಲ್ಲಿ ಅಮೆರಿಕ ನೇತೃತ್ವದಲ್ಲಿ ಸದ್ದಾಂನನ್ನು ಬಂಧಿಸಿ, ಬಳಿಕ ಗಲ್ಲಿಗೇರಿಸಲಾಯಿತು. ಸದ್ದಾಂ ಸರ್ಕಾರವು 1991ರಲ್ಲಿ ಗಲ್ಫ್‌ ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು ಮತ್ತು ರಹಸ್ಯ ಪರಮಾಣು ಶಸ್ತ್ರಾಸ್ತ್ರ ಯೋಜನೆಯನ್ನು ರೂಪಿಸಿತ್ತು ಎಂದು ಆರೋಪಿಸಲಾಗಿದೆ.

ಹತ್ಯೆ: ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ (ಐಆರ್‌ಜಿ) ಉನ್ನತ ಅಧಿಕಾರಿ ಹಾಗೂ ಆಯತೊಲ್ಲಾ ಅಲಿ ಖಮೇನಿ ಆಪ್ತ ಜನರಲ್ ಅಲಿ ಶಾದ್‌ಮಾನಿ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ಹೇಳಿದೆ.

ಶಾದ್‌ಮಾನಿ ಅವರನ್ನು ಐಆರ್‌ಜಿಯ ಖತಮ್ ಅಲ್‌ ಅನ್‌ಬಿಯಾ ಕೇಂದ್ರ ಕಚೇರಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು.

ದಾಳಿ: ಟೆಹರಾನ್‌ ಮೇಲೆ ಮಂಗಳವಾರ ಬೆಳಿಗ್ಗೆ ಇಸ್ರೇಲ್‌ ಭಾರಿ ಪ್ರಮಾಣದ ವೈಮಾನಿಕ ದಾಳಿ ನಡೆಸಿದ್ದು, ನಗರದ ಹಲವೆಡೆ ಸ್ಫೋಟಗಳು ಸಂಭವಿಸಿವೆ. ನಟಾನ್ಜದಲ್ಲಿ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ಇರಾನ್‌ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳಾಂತರಕ್ಕೆ ಆದೇಶ: ಇರಾನ್‌ ರಾಜಧಾನಿ ಟೆಹರಾನ್ ಮೇಲಿನ ದಾಳಿಯನ್ನು ನಾಲ್ಕನೇ ದಿನವೂ ಮುಂದುವರಿಸಿರುವ ಇಸ್ರೇಲ್, 3 ಲಕ್ಷ ಜನರ ಸ್ಥಳಾಂತರಕ್ಕೆ ಸೂಚಿಸಿದೆ.

ಇರಾನ್‌ನಿಂದ ಪ್ರತಿ ದಾಳಿ

ಇರಾನ್‌ ಕೂಡ ಇಸ್ರೇಲ್‌ ಮೇಲೆ ಪ್ರತಿದಾಳಿ ನಡೆಸಿದೆ. ಈ ವರೆಗೆ ಇಸ್ರೇಲ್‌ ಮೇಲೆ 400 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ನೂರಾರು ಮಾನವ ರಹಿತ ವೈಮಾನಿಕ ಸಾಧನಗಳನ್ನು (ಯುಎವಿ) ಬಳಸಿ ದಾಳಿ ನಡೆಸಲಾಗಿದೆ ಎಂದು ಇರಾನ್‌ ಹೇಳಿದೆ. ಇಸ್ರೇಲ್‌ನ ಮಿಲಿಟರಿ ಗುಪ್ತಚರ ನಿರ್ದೇಶನಾಲಯ ಹಾಗೂ ಮೊಸಾದ್‌ನ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದು ಇರಾನ್‌ ಹೇಳಿದೆ. ಸಂಘರ್ಷ ಶುರುವಾಗಿನಿಂದ 1277 ಜನ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಆರೋಗ್ಯ ಇಲಾಖೆ ವರದಿ ಮಾಡಿದೆ

ಪ್ರಮುಖ ಬೆಳವಣಿಗೆಗಳು

  • ಇರಾನ್‌ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದ ಹಲವು ದೇಶಗಳ ವಾಯಪ್ರದೇಶಗಳನ್ನು ನಿರ್ಬಂಧಿಸಲಾಗಿದೆ. ಹಲವಾರು ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿದೆ

  • ಇರಾನ್‌ ತೊರೆಯಲು ಯಾವುದೇ ಸಂಪರ್ಕ ವ್ಯವಸ್ಥೆಗಳಿಲ್ಲದೇ ನೂರಾರು ಜನ ಸಂಕಷ್ಟದಲ್ಲಿದ್ದಾರೆ

  • ಇರಾನ್‌ -ಇಸ್ರೇಲ್ ಸಂಘರ್ಷ ಆರಂಭಗೊಂಡ ಬಳಿಕ ಸುಮಾರು 600 ಜನ ವಿದೇಶಿಗರು ನೆರೆ ರಾಷ್ಟ್ರವಾದ ಅಜರ್‌ಬೈಜಾನ್‌ ಗಡಿಯೊಳಗೆ ಪ್ರವೇಶಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries