ನವದೆಹಲಿ: ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಡಿ ಭಾರತದ ನಿಖರವಾದ ದಾಳಿ ನಡೆಸಿದ ನಂತರ ಪಾಕಿಸ್ತಾನ ನಕಲಿ ಉಪಗ್ರಹ ಚಿತ್ರಗಳು, ಫೋಟೋಗಳನ್ನು ಹಂಚಿಕೊಂಡು ತಪ್ಪು ಮಾಹಿತಿ ನೀಡುತ್ತಿದೆ.
ಪಂಜಾಬ್‌ನ ಆದಂಪುರ ಮತ್ತು ಗುಜರಾತ್‌ನ ಭುಜ್‌ನಲ್ಲಿ ಭಾರತೀಯ ವಾಯುನೆಲೆಗಳ ಮೇಲೆ ಯಶಸ್ವಿ ದಾಳಿಗಳನ್ನು ನಡೆಸಿರುವುದಾಗಿ ಹೇಳಿಕೊಂಡಿದೆ. ಆದರೆ, ಬಹು ಸ್ವತಂತ್ರ ಸ್ಯಾಟಲೈಟ್ ಚಿತ್ರಗಳ ಪರಿಶೀಲನೆಯಲ್ಲಿ ಇಸ್ಲಾಮಾಬಾದ್‌ನ ಸಮರ್ಥನೆ ಕಟ್ಟುಕಥೆಗಳೆಂದು ಬಹಿರಂಗವಾಗಿದೆ.
ಈ ವಿಚಾರದಲ್ಲಿ ಉಭಯ ರಾಷ್ಟ್ರಗಳ ಹೇಳಿಕೆಯನ್ನು ವ್ಯವಸ್ಥಿತವಾಗಿ ಪರಿಶೀಲಿಸಿದ ಟಾಪ್ ಓಪನ್ ಸೋರ್ಸ್ ಇಂಟೆಲಿಜೆನ್ಸ್ (OSINT) ವಿಶ್ಲೇಷಕ ವಿಶ್ಲೇಷಕ ಡೇಮಿಯನ್ ಸೈಮನ್, ಸತ್ಯವನ್ನು ಬಹಿರಂಗಪಡಿಸಿದ್ದಾರೆ ಪಾಕಿಸ್ತಾನದ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ಭಾರತದ ಸೇನಾಪಡೆಗಳಿಂದ ಆದ ಹಾನಿಯ ಮುಜುಗರಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ತಪ್ಪು ಮಾಹಿತಿ ನೀಡುತ್ತಿದೆ. ಇದಕ್ಕಾಗಿ ಹಳೆಯ ಚಿತ್ರಗಳನ್ನು ಬಳಸಿರುವುದು ಸೈಮನ್ ಅವರ ವಿಶ್ಲೇಷಣೆಯಲ್ಲಿ ಬಹಿರಂಗವಾಗಿದೆ.
ಆದಂಪುರ ವಾಯುನೆಲೆ: 'ಸುಖೋಯ್' ಹಾನಿ ಕುರಿತು ಸುಳ್ಳು: ಕಳೆದ ತಿಂಗಳು ನಡೆದ ನಾಲ್ಕು ದಿನಗಳ ಮಿಲಿಟರಿ ಸಂಘರ್ಷದ ವೇಳೆಯಲ್ಲಿ ಆದಂಪುರ ವಾಯುನೆಲೆಯಲ್ಲಿ ಚೀನಾ ನಿರ್ಮಿತ ಜೆಎಫ್-17 ಫೈಟರ್, ಭಾರತದ ಜೆಟ್ ಸುಖೋಯ್ ಸು-30 ಯುದ್ಧ ವಿಮಾನವನ್ನು ಹಾನಿಗೊಳಿಸಿದೆ ಎಂದು ಪಾಕಿಸ್ತಾನದ ವರದಿಗಳು ಹೇಳಿದ್ದವು. ಆದರೆ ಈ ಚಿತ್ರವು ಸಂಘರ್ಷಕ್ಕೂ ಮುಂಚಿನ ದಿನಾಂಕವನ್ನು ಹೊಂದಿದೆ. ವಿಮಾನವು ನಿಯಮಿತ ನಿರ್ವಹಣೆಯಲ್ಲಿರುವ ಮಿಗ್-29 ಆಗಿತ್ತು. ಹಾನಿ ಎಂದು ಹೇಳಿರುವುದು ಕ್ಷಿಪಣಿ ಹೊಡೆತದ್ದಲ್ಲ, ಪರೀಕ್ಷೆಯಿಂದ ಎಂಜಿನ್‌ನಲ್ಲಿ ಮಸಿ ಸಂಗ್ರಹವಾಗಿರುವುದು ಎಂದು ಉನ್ನತ ಚಿತ್ರಣ ವಿಶ್ಲೇಷಕ ಡೇಮಿಯನ್ ಸೈಮನ್ ಸ್ಪಷ್ಟಪಡಿಸಿದ್ದಾರೆ.




