ನವದೆಹಲಿ: 'ಇರಾನ್‌ನಲ್ಲಿ ಪರಿಸ್ಥಿತಿ ತುಂಬಾ ಗಂಭಿರವಾಗಿದೆ. ನಾವು ಭಯಭೀತರಾಗಿದ್ದೆವು, ಭಾರತಕ್ಕೆ ಕರೆತರಲು ತ್ವರಿತವಾಗಿ ಕೆಲಸ ಮಾಡಿದ ಭಾರತ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿಗೆ ನಾವು ಧನ್ಯವಾದ ಹೇಳುತ್ತೇವೆ' ಎಂದು ಇರಾನ್‌ನಿಂದ ವಾಪಸಾದ ಕಾಶ್ಮಿರದ ವಿದ್ಯಾರ್ಥಿ ವಾರ್ತಾ ಹೇಳಿಕೊಂಡರು.
'ನಮ್ಮ ನೆರೆಹೊರೆಯ ಮೇಲೆ ದಾಳಿ ನಡೆಯಿತು. ಭಾರತ ಸರ್ಕಾರ ನೆರವಿಗೆ ಧಾವಿಸಿದಾಗ ಸುರಕ್ಷಿತಾ ಭಾವ ಮೂಡಿತು. ಅರ್ಮೇನಿಯಾ ಸರ್ಕಾರವೂ ಬಹಳ ಸಹಾಯ ಮಾಡಿದೆ' ಎಂದಿದ್ದಾರೆ.
ಭಾರತ ಸರ್ಕಾರ ಆರಂಭಿಸಿದ ಆಪರೇಷನ್ ಸಿಂಧು ಅಡಿಯಲ್ಲಿ ಸಂಘರ್ಷ ಪೀಡಿತ ಇರಾನ್‌ನಿಂದ ಮೊದಲ ಬ್ಯಾಚ್‌ನಲ್ಲಿ 110 ವಿದ್ಯಾರ್ಥಿಗಳು ತಾಯ್ನಾಡಿಗೆ ಗುರುವಾರ ಬೆಳಿಗ್ಗೆ ಆಗಮಿಸಿದ್ದಾರೆ.
'ಕ್ಷಿಪಣಿಗಳು ಹಾರುತ್ತಿರುವುದನ್ನು ನೋಡಿದ್ದೇವೆ. ಯುದ್ಧ ನಡೆಯುತ್ತಿತ್ತು. ನಮ್ಮ ನೆರೆಹೊರೆಯ ಮೇಲೆ ಬಾಂಬ್ ದಾಳಿ ನಡೆಯುತ್ತಿತ್ತು. ಪರಿಸ್ಥಿತಿಯ ಬಗ್ಗೆ ನಮಗೆ ತುಂಬಾ ಭಯವಾಗಿತ್ತು. ಆ ದಿನಗಳನ್ನು ನಾವು ಮತ್ತೆಂದೂ ನೋಡುವುದಿಲ್ಲ ಎಂದುಕೊಂಡಿದ್ದೇವೆ. ಇನ್ನೂ ಹಲವು ವಿದ್ಯಾರ್ಥಿಗಳು ಇರಾನ್‌ನಲ್ಲಿ ಸಿಲುಕಿದ್ದಾರೆ. ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಅವರನ್ನೂ ಶೀಘ್ರದಲ್ಲೇ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗುತ್ತದೆ ಎಂದು ಭಾವಿಸುತ್ತೇನೆ' ಎಂದು ಇರಾನ್‌ನಲ್ಲಿ ಎಂಬಿಬಿಎಸ್ ಮಾಡುತ್ತಿದ್ದ ವಿದ್ಯಾರ್ಥಿ ಮಿರ್ ಖಲೀಫಾ ಹೇಳಿದ್ದಾರೆ.
'ಬಸ್‌ನಲ್ಲಿ ಪ್ರಯಾಣಿಸುವಾಗ ಕ್ಷಿಪಣಿ, ಡ್ರೋನ್‌ಗಳು ಬೀಳುತ್ತಿದ್ದುದು ಕಣ್ಣೆದುರೇ ಕಾಣುತ್ತಿತ್ತು. ಮಾಧ್ಯಮಗಳಲ್ಲಿ ತೋರಿಸುತ್ತಿರುವುದು ಸರಿಯಾಗಿದೆ. ಅಲ್ಲಿನ ಪರಿಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ, ಟೆಹರಾನ್ ಸಂಪೂರ್ಣ ನಾಶವಾಗಿದೆ' ಎಂದು ಅಲಿ ಅಕ್ಬರ್ ಎನ್ನುವವರು ವಿವರಿಸಿದ್ದಾರೆ.




