ಶಿಮ್ಲಾ: ಹಿಮಾಚಲ ಪ್ರದೇಶ ಪ್ರವಾಸದ ವೇಳೆ ಹಿರಿಯ ರಾಜಕಾರಣಿ, ಕಾಂಗ್ರೆಸ್ ನಾಯಕಿ, ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ (Sonia Gandhi) ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಅವರನ್ನು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (IGMC) ದಾಖಲಿಸಲಾಗಿದೆ.
ಅಲ್ಲಿ ಅವರಿಗೆ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಕ್ಕು ಶೀಘ್ರದಲ್ಲೇ ಆಸ್ಪತ್ರೆಗೆ ತೆರಳಲಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಕಳೆದ ಫೆಬ್ರವರಿಯಲ್ಲಿಯೂ ಸೋನಿಯಾ ಗಾಂಧಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಆ ವೇಳೆ ಅವರನ್ನು ದಿಲ್ಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಭಯಪಡಬೇಕಾಗಿಲ್ಲ ಎಂದು ವೈದ್ಯರು ತಿಳಿಸಿದ್ದರು. ಬಳಿಕ ಚೇತರಿಸಿಕೊಂಡ ಅವರನ್ನು ಡಿಸ್‌ಚಾರ್ಚ್ ಮಾಡಲಾಗಿತ್ತು.
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಳೆದ ವರ್ಷ ಡಿಸೆಂಬರ್‌ನಲ್ಲಿ 78ನೇ ವರ್ಷಕ್ಕೆ ಕಾಲಿಟ್ಟಿದ್ದರು. ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ ರಾಜ್ಯಸಭೆಯ ಅದಿವೇಶನದಲ್ಲಿಯೂ ಪಾಲ್ಗೊಂಡಿದ್ದರು. ಫೆ. 10ರಂದು ಸೋನಿಯಾ ಗಾಂಧಿ ಅವರು ಜನಸಂಖ್ಯಾ ಗಣತಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು. ದೇಶದಲ್ಲಿ ಸುಮಾರು 14 ಕೋಟಿ ಜನರು ಆಹಾರ ಭದ್ರತೆಯಿಂದ ವಂಚಿತರಾಗಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದ್ದರು.




